(ನ್ಯೂಸ್ ಕಡಬ) newskadaba.com ಕಡಬ, ಸೆ.15. ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸುಳ್ಯದ ವಕೀಲ ವೆಂಕಪ್ಪ ಗೌಡರ ಹೇಳಿಕೆಯನ್ನು ಕಡಬ ಒಕ್ಕಲಿಗ ಯುವ ಸಮಿತಿಯ ಪದಾಧಿಕಾರಿಗಳು ಖಂಡಿಸಿದ್ದಾರೆ.
ಯುವ ಸಮಿತಿಯ ಅಧ್ಯಕ್ಷ ಮೋಹನ ಗೌಡ ಕೋಡಿಂಬಾಳ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗುರುವಾರದಂದು ಕಡಬ ಪೇಟೆಯಲ್ಲಿ ‘ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಡಿ.ಕೆ.ಶಿ.ಅಭಿಮಾನಿಗಳು’ ಎಂಬ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಬಂಧನದ ವಿರುದ್ಧ ರಾಜಕೀಯ ವ್ಯಕ್ತಿಗಳು ಪ್ರತಿಭಟನಾ ಸಭೆ ನಡೆಸಿದ್ದು, ಈ ಪ್ರತಿಭಟನಾ ಸಭೆಯಲ್ಲಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರ ಬಗ್ಗೆ ಅಸಂಬದ್ಧ ಪದ ಬಳಕೆ ಮಾಡಿದ ಸುಳ್ಯದ ವಕೀಲ ಎಂ. ವೆಂಕಪ್ಪ ಗೌಡ ಅವರ ದುರ್ವರ್ತನೆಯನ್ನು ಕಡಬ ವಲಯ ಒಕ್ಕಲಿಗ ಯುವ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ. ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ ಎಂಬುದಾಗಿ ಪ್ರಚಾರ ನಡೆಸಿದ್ದರಿಂದ ಸಮಾಜಕ್ಕೆ ತಪ್ಪು ಮಾಹಿತಿ ಹೋಗುತ್ತದೆ.
ಸಂಘದ ತತ್ವ ಸಿದ್ಧಾಂತ ಹಾಗೂ ಗೌಡ ಸಮುದಾಯದ ಹಿತದೃಷ್ಟಿಯಿಂದ ಸೆ.12 ರಂದು ನಡೆಯುವ ರಾಜಕೀಯ ಪ್ರೇರಿತ ಪ್ರತಿಭಟನೆಗೆ ಸಂಘದ ಬೆಂಬಲ ಇಲ್ಲ, ಗೌಡ ಸಂಘ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ. ಅಲ್ಲದೆ ಬೆಂಬಲವು ಇಲ್ಲ. ನಮಗೂ ಆ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮರುದಿನ ಪ್ರತಿಭಟನೆ ನಡೆದಿದ್ದು ಈ ಸಂದರ್ಭದಲ್ಲಿ ಒಕ್ಕಲಿಗ ಸಂಘದ ಅಧ್ಯಕ್ಷರ ಮಾತಿಗೆ ಎಲ್ಲ ಸಮಾಜ ಭಾಂದವರು ಕೈ ಜೋಡಿಸಿದ ಪರಿಣಾಮ ಪ್ರತಿಭಟನೆಗೆ ಯಾರು ಬಂದಿರಲಿಲ್ಲ. ಇದರಿಂದ ಇರಿಸು ಮುರಿಸುಗೊಂಡ ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಭಾಷಣಕಾರರಲ್ಲಿ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ನೀಡಿರುವುದರಿಂದಲೇ ಪ್ರತಿಭಟನಾ ಸಭೆಯಲ್ಲಿ ಸುಳ್ಯದ ಎಂ. ವೆಂಕಪ್ಪ ಗೌಡ ಎಂಬವರು ನಮ್ಮ ಸಂಘದ ಗೌರವಾನ್ವಿತ ಅಧ್ಯಕ್ಷರ ಬಗ್ಗೆ ಮಾತನಾಡಿ, ‘ಇಲ್ಲಿನ ಒಕ್ಕಲಿಗ ಸಂಘದ ಅಧ್ಯಕ್ಷರಂತ ಹೇಳಿಕೊಳ್ಳುವವರು ಅಧಿಕೃತವೋ ಅನಧಿಕೃತವೋ ಎಂದು ಪ್ರಶ್ನಿಸಿ, ಅಸಂಬದ್ಧ ಪದಗಳನ್ನು ಬಳಸಿ ಸಂಘದ ಅಧ್ಯಕ್ಷರನ್ನು ನಿಂದಿಸಿದ್ದಾರೆ. ಇದನ್ನು ಕಡಬ ಒಕ್ಕಲಿಗ ಯುವ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ನಮ್ಮ ಅಧ್ಯಕ್ಷರು ತಳೆದ ನಿಲುವು ಮತ್ತು ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಯುವ ಸಮಿತಿಯ ಕಾರ್‍ಯದರ್ಶಿ ನಾರಾಯಣ ಗೌಡ ಬಲ್ಯ, ಗಿರೀಶ್ ಗೌಡ ಕೊರಂದೂರು, ರಾಧಾಕೃಷ್ಣ ಗೌಡ ಕೋಲ್ಪೆ, ತೀರ್ಥೇಶ್ ಗೌಡ, ಜಯರಾಂ ಆರ್ತಿಲ ಮೊದಲಾದವರು ಉಪಸ್ಥಿತರಿದ್ದರು.