(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ 86.20 ರವರೆಗಿನ ಚಾರ್ಮಾಡಿ ಘಾಟ್ ಭಾಗದಲ್ಲಿ ಆಗಸ್ಟ್ 5 ರಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದೆ.
ಆದ್ದರಿಂದ ಆ. 6 ರಂದು ಬಿರುಗಾಳಿ ಸಹಿತ ಸುರಿದ ಭಾರೀ ಪ್ರಮಾಣದ ಮಳೆಗೆ ರಸ್ತೆಗೆ ಬಾಗಿರುವ ದೊಡ್ಡ ಗಾತ್ರದ ಮರಗಳೊಂದಿಗೆ ಗುಡ್ಡಕುಸಿತ ಉಂಟಾಗಿರುತ್ತದೆ.ಚಾರ್ಮಾಡಿ ಘಾಟ್ ಭಾಗದಲ್ಲಿ ಇನ್ನೂ ಮಳೆ ಹೆಚ್ಚಾಗಿ ಬೀಳುತ್ತಿರುವ್ಯದರಿಂದ ಹಾಗೂ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು 2 ದಿನಗಳಿಗೆ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ಆಗಸ್ಟ್ 7 ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 8 ರಂದು ಮಧ್ಯರಾತ್ರಿ 12 ಗಂಟೆವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಿದ್ದಾರೆ.
ವಾಹನ ಸಂಚಾರವನ್ನು ನಿರ್ಬಂಧಿಸಿರುವ ಮಾರ್ಗ ಹಾಗೂ ಬದಲಿ ಮಾರ್ಗಗಳು ಇಂತಿವೆ: ರಾಷ್ಟ್ರೀಯ ಹೆದ್ದಾರಿ -73(ಹಳೆ ರಾ.ಹೆ.234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ 86.20 ರವರೆಗಿನ ಚಾರ್ಮಾಡಿ ಘಾಟ್ ಭಾಗದ ವಾಹನ ಸಂಚಾರವನ್ನು ನಿಷೇಧಿಸಿದ್ದು, ಉಜಿರೆ- ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ (ರಾ.ಹೆ-75) ಮುಖಾಂತರ ಸಂಚರಿಸಬಹುದಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ – ಜನ್ನಾಪುರ –ಆನೆಮಹಲ್-ಶಿರಾಡಿ –ಗುಂಡ್ಯ (ರಾಹೆ 75) ಮುಖಾಂತರ ಸಂಚರಿಸಲು ಬದಲಿ ರಸ್ತೆ ವ್ಯವಸ್ಥೆ ಮಾಡಿ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.