ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ರೆ| ಡಾ| ಜೋರ್ಜ್ ಕಾಲಾಯಿಲ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಆ.07. ಮಲಂಕರ ಸಿರಿಯನ್ ಕ್ಯಾಥಲಿಕ್ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ರೆಂಜಿಲಾಡಿ ಗ್ರಾಮದ ರೆ| ಡಾ| ಜೋರ್ಜ್ ಕಾಲಾಯಿಲ್ ಆಯ್ಕೆಯಾಗಿದ್ದಾರೆ.

ಅವರನ್ನು ಕ್ಯಾಥಲಿಕ್ ಧರ್ಮಸಭೆಯ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ. ಕಳೆದ 7 ವರ್ಷಗಳಿಂದ ನೂತನ ಪುತ್ತೂರು ಧರ್ಮಪ್ರಾಂತ್ಯದ ಸೇವೆ ಸಲ್ಲಿಸುತ್ತಿದ್ದ ಅತೀ ವಂದನೀಯ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರ ನಿವೃತ್ತಿಯಿಂದ ತೆರವಾದ ಹುದ್ದೆಗೆ 2017 ಜನವರಿ 24ರಿಂದ ಧರ್ಮಪ್ರಾಂತ್ಯದ ಆಡಳಿತಾಧಿಕರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಡಾ| ಜೋರ್ಜ್ ಕಾಲಾಯಿಲ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಕ್ಯಾಥಲಿಕ್ ಧರ್ಮಸಭೆಯ ಕೇಂದ್ರ ತಿರುವನಂತಪುರ ಸೈಂಟ್ ಮೆರೀಸ್ ಕಥಿಡ್ರಲ್ನಲ್ಲಿ ಧರ್ಮಸಭೆಯ ಮುಖಂಡರಾದ ಮೋರಾನ್ ಮೋರ್ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲಿಕ್ಕೋಸ್ ಮತ್ತು ಪುತ್ತೂರು ಧರ್ಮಪ್ರಾಂತ್ಯದ ನೂಜಿಬಾಳ್ತಿಲ ಪ್ರೋ ಕಥಿಡ್ರಲ್ ನಲ್ಲಿ ಧರ್ಮಪ್ರಾಂತ್ಯದ ಚಾನ್ಸಿಲರ್ ರೆ| ಫಾ| ಫಿಲಿಪ್ ನೆಲ್ಲಿವಿಳ ಪೋಪರ ಆದೇಶವನ್ನು ಪ್ರಕಟಿಸಿದ್ದಾರೆ. ಜೋರ್ಜ್ ಕಾಲಾಯಿಲ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರೆಂಜಿಲಾಡಿ ಗ್ರಾಮದ ದಿ| ಚಾಕೋ, ಮರಿಯಮ್ಮ ದಂಪತಿಗಳ ಪುತ್ರರಾಗಿದ್ದಾರೆ. ನಿಯುಕ್ತ ಧರ್ಮಾಧ್ಯಕ್ಷರುಗಳ ಪಟ್ಟಾಭಿಷೇಕ ಸೆಪ್ಟಂಬರ್ 21 ರಂದು ಕೇರಳದ ಪತನಂತಿಟ್ಟ ಅಡೂರಿನಲ್ಲಿ ಬಳಿಕ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಸ್ಥಾನಾರೋಹಣ ಸೆಪ್ಟೆಂಬರ್ 30ರಂದು ನೂಜಿಬಾಳ್ತಿಲ ಪ್ರೋ ಕಥಿಡ್ರಲ್ ನಲ್ಲಿಯೂ ನಡೆಯಲಿದೆ. ಅಲ್ಲದೆ ಅಗಸ್ಟ್‌ 8 ಸಾಯಂಕಾಲ ನೂಜಿಬಾಳ್ತಿಲ ಸೈಂಟ್ ಮೇರೀಸ್ ಪ್ರೋ ಕಥಿಡ್ರಲ್ ನಲ್ಲಿ ಅದ್ದೂರಿ ಸ್ವಾಗತ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top