(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.18. ದೇಶಾದ್ಯಂತ ತೀವ್ರ ತರದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇದರ ಪರಿಣಾಮ ಇದೀಗ ಹೊರ ಜಿಲ್ಲೆಗಳಿಂದ ದಕ್ಷಿಣ ಕನ್ನಡಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ, ಪ್ರಮುಖ ಪುಣ್ಯಕ್ಷೇತ್ರಗಳ ಭೇಟಿ ಮಾಡುವ ಭಕ್ತರ ಮೇಲೂ ಬಿದ್ದಿದೆ.
ಒಂದೆಡೆ ಜಿಲ್ಲೆಯಲ್ಲಿ ರೇಶನ್ ಮೂಲಕ ಜಿಲ್ಲಾಡಳಿತವು ನೀರನ್ನು ಪೂರೈಸುತ್ತಿದ್ದು, ವಾರಕ್ಕೆ ಎರಡು – ಮೂರು ದಿನಕ್ಕೊಮ್ಮೆ ಮಾತ್ರ ನೀರು ದೊರೆಯುತ್ತಿದೆ. ಇನ್ನೊಂದೆಡೆ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ತಮ್ಮ ಪ್ರವಾಸವನ್ನು ಮುಂದೂಡಲು ಧರ್ಮಸ್ಥಳ ಆಡಳಿತ ಮಂಡಳಿಯು ಮನವಿ ಮಾಡಿದೆ. ಧರ್ಮಸ್ಥಳಕ್ಕೆ ಬರುವ ಯಾತಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತಿದ್ದು, ಈ ಕಾರಣಕ್ಕಾಗಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ.