ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ- ಜಿಲ್ಲಾಧಿಕಾರಿ

ಮಂಗಳೂರು ಮೇ 2 ( ನ್ಯೂಸ್ ಕಡಬ) newskadaba.com,):- ಕಳೆದ ಮುಂಗಾರಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಹಿನ್ನಲೆಯಾಗಿರಿಸಿ, ಪ್ರಸಕ್ತ ಸಾಲಿನಲ್ಲಿ ಪ್ರಾಕೃತಿಕ ವಿಕೋಪವನ್ನು ನಿಭಾಯಿಸಲು ತಹಸೀಲ್ದಾರ್ ಮಟ್ಟದಲ್ಲಿ ಸ್ಥಳೀಯವಾಗಿ ಯೋಜನೆ ರೂಪಿಸಿ ಸಜ್ಜಾಗುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದರು. ]ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಸುಸ್ಸಜ್ಜಿತ ಕಂಟ್ರೋಲ್ ರೂಂ ಈಗಾಗಲೇ ಅನುಷ್ಠಾನದಲ್ಲಿದ್ದು, ತಾಲೂಕು ಮಟ್ಟದಲ್ಲಿ ಕಳೆದ ವರ್ಷ ಎದುರಿಸಿದ ವಿಕೋಪವನ್ನು ಗಮನದಲ್ಲಿರಿಸಿ ಒಳ್ಳೆಯ ಕೆಲಸಗಾರರನ್ನು ಗುರುತಿಸಿ ತಂಡ ಕಟ್ಟಿಕೊಂಡು ಕಂಟ್ರೋಲ್ ರೂಂ ಮುಖಾಂತರವೇ ಅಗತ್ಯ ಇರುವ ಕಡೆ ತಲುಪಲು ಸಾಧ್ಯವಾಗುವಂತೆ ನೆಟ್‍ವರ್ಕ್ ನಿರ್ಮಿಸಿ ಎಂದು ಜಿಲ್ಲಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳಿಗೆ ಸಲಹೆ ಮಾಡಿದರು. ಅನಾಹುತ ಸಂಭವಿಸಿದೆಡೆ ಒಬ್ಬರೇ ಓಡದೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲು ಮುಖ್ಯವಾಗಿ ಅಗ್ನಿಶಾಮಕ, ಪೊಲೀಸ್ ಮತ್ತು ಇತರ ಸಂಬಂಧಪಟ್ಟವರೊಂದಿಗೆ ತಾಲೂಕು ಮಟ್ಟದಲ್ಲಿ ತಂಡವನ್ನು ರಚಿಸಿ; ತಾಲೂಕಿನ ಚರಿತ್ರೆಯನ್ನೊಮ್ಮೆ ಮನನ ಮಾಡಿಕೊಳ್ಳಿ; ಎಲ್ಲಿ ನೆರೆ ಸಂಭವಿಸಲಿದೆ, ಭೂಮಿ ಕುಸಿಯಲಿದೆ, ಕಡಲ್ಕೊರೆತ ಸಂಭವಿಸಲಿದೆ ಎಂಬುದನ್ನು ಪರಿಶೀಲಿಸಿ ಎಂದರು. ಮಹಾ ನಗರಪಾಲಿಕೆ ಹಾಗೂ ನಗರಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಮುಚ್ಚಿರುವ ನಾಲಾಗಳನ್ನು ತೆರವುಗೊಳಿಸಿ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದರೆ ನಗರದ ನೆರೆಗೆ ಅವಕಾಶವಿರುವುದಿಲ್ಲ; ಈ ಎಲ್ಲ ಕೆಲಸಗಳು ಶೀಘ್ರವಾಗಿ ಮುಗಿಯಬೇಕು. ಈ ಮಾದರಿಯ ಕೆಲಸಗಳಿಗೆ ಟೆಂಡರ್ ಕರೆಯಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಿದರು. ಜಿಲ್ಲೆಯ ಅಗ್ನಿಶಾಮಕ ದಳ ಈಗಾಗಲೇ ಅಗತ್ಯ ಸಲಕರಣೆಗಳೊಂದಿಗೆ ಮಳೆಗಾಲವನ್ನು ಎದುರಿಸಲು ಸಜ್ಜಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ವಿವರಿಸಿದರು. ಮಳೆಗಾಲದಲ್ಲಿ ಜೀವಹಾನಿ ಹಾಗೂ ನೋವುಗಳು ಸಂಭವಿಸಿದರೆ 48 ಗಂಟೆಯೊಳಗಾಗಿ ಪರಿಹಾರ ನೀಡಲು ಅಧಿಕಾರವನ್ನು ತಹಸೀಲ್ದಾರ ಅವರಿಗೆ ನೀಡಲಾಗಿದ್ದು, ಯಾವುದೇ ರೀತಿ ವಿಳಂಬ ಸಲ್ಲದು ಎಂದರು. ಮಳೆಗಾಲದಲ್ಲಿ ಸ್ಥಳೀಯ ಪ್ರದೇಶಕ್ಕೆ ಸೀಮಿತವಾಗಿ ಮಕ್ಕಳ ಸುರಕ್ಷೆಯನ್ನು ಗಮನದಲ್ಲಿರಿಸಿ ತಹಸೀಲ್ದಾರ್ ಅವರು ಡಿಡಿಪಿಐ ಅಥವಾ ಬಿಇಒ ಗಳೊಂದಿಗೆ ಸಮಾಲೋಚಿಸಿ ರಜೆ ನೀಡಿ ಎಂದು ಈ ಸಂದರ್ಭದಲ್ಲಿ ವಿವರಿಸಿದರು. ಶಿರಾಡಿ, ಚಾರ್ಮಾಡಿಯಲ್ಲಿ ಪಟ್ರೋಲಿಂಗ್‍ಗೆ ವಾಹನವೊಂದನ್ನು ನಿಯೋಜಿಸಿ, ಅಲ್ಲಿ ಗುಡ್ಡ ಕುಸಿತಗಳು ಸಂಭಿಸಿವಿಸಿದರೆ ತುರ್ತು ನೆರವಿಗೆ ಸಜ್ಜಾಗಿ ಎಂದು ಪುತ್ತೂರು ಮತ್ತು ಬೆಳ್ತಂಗಡಿ ತಹಸೀಲ್ದಾರ್ ಅವರಿಗೆ ಹಾಗೂ ಸಹಾಯಕ ಆಯುಕ್ತರಾದ ಕೃಷ್ಣ ಮೂರ್ತಿ ಅವರಿಗೆ ಸೂಚನೆಗಳನ್ನು ನೀಡಿದರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯು ತಮ್ಮ ನೂರು ಸ್ವಯಂಸೇವಕರೊಂದಿಗೆ ಜಿಲ್ಲಾಡಳಿತಕ್ಕೆ ಸಕಾಲ ನೆರವನ್ನು ನೀಡಲು ಸನ್ನದ್ಧವಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಅವರು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಪೊಲೀಸ್ ಉಪ ಆಯುಕ್ತರಾದ ಶ್ರೀನಿವಾಸ್ ಗೌಡ, ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್, ಕೃಷ್ಣ ಮೂರ್ತಿ, ಅಗ್ನಿಶಾಮಕ ಆಯುಕ್ತರಾದ ಟಿ.ಎನ್ ಶಿವಶಂಕರ್ ಹಾಗೂ ಎಲ್ಲಾ ಅಧಿಕಾರಿ ಗಳು ಉಪಸ್ಥಿತರಿದ್ದರು.

Also Read  ಫೆ. 15ರಂದು ಲೋಕಾಯುಕ್ತ ಜನಸಂಪರ್ಕ ಸಭೆ

error: Content is protected !!
Scroll to Top