ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಸರಕಾರಕ್ಕೆಶಿಫಾರಸ್ಸು► ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ

(ನ್ಯೂಸ್ ಕಡಬ) newskadaba.com ಕಡಬ,ಫೆ.04.ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಆಯೋಗವು ಸರಕಾರಕ್ಕೆ ಶಿಫಾರಸ್ಸು  ಮಾಡಲಿದೆ ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ ಹೇಳಿದರು.ಅವರು  ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಯಲ್ಲಿ ಮಾತನಾಡುತ್ತಿದ್ದರು.

ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಪಡಿತರ ಯುನಿಟ್‍ವೊಂದರ 5 ಕಿಲೋ ಅಕ್ಕಿ ಮತ್ತು ಎರಡು ಕಿಲೋ ರಾಗಿ, ಜೋಳ ಅಥವಾ ಗೋಧಿಯನ್ನು ಒದಗಿಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಯುನಿಟ್‍ವೊಂದರ ಏಳು ಕಿಲೋ ಅಕ್ಕಿಯನ್ನು ಮಾತ್ರ ಒದಗಿಸಲಾಗುತ್ತಿದೆ. ಇಲ್ಲಿಯ ಗ್ರಾಹಕರಿಂದ ಕುಚ್ಚಲಕ್ಕಿಗೆ ಬೇಡಿಕೆ ಇರುವುದು ಸಹಜವಾಗಿದೆ. ಲಭ್ಯ ಕುಚ್ಚಲಕ್ಕಿಯನ್ನು ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು. ಜಿಲ್ಲೆಯ ಅಗತ್ಯ ಹಾಗೂ ಬೇಡಿಕೆಗಳನ್ನು ಗಮನದಲ್ಲಿರಿಸಿ ರಾಜ್ಯವಲಯಕ್ಕೆ ಸಮಗ್ರ ವರದಿ ನೀಡಲಾಗುವುದು; ಕ್ರಮಕ್ಕೆ ಸರ್ಕಾರಕ್ಕೇ ಅಧಿಕಾರ ಎಂದಾದರೆ ಸರ್ಕಾರಕ್ಕೇ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು ಎಂದರು. ಸಹಕಾರಿ ಸಂಘಗಳು ನಡೆಸುವ ನ್ಯಾಯಬೆಲೆ ಅಂಗಡಿಗಳನ್ನು ಭಾನುವಾರ ತೆರೆಯುವ ಬಗ್ಗೆಯೂ ಸೂಕ್ತ ನಿರ್ದೇಶನಗಳನ್ನು ಆಯೋಗ ನೀಡಲಿದೆ ಎಂದು ಹೇಳಿದ ಅಧ್ಯಕ್ಷರು, ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಮಾರ್ಗದರ್ಶನ ಪಡೆದು ಅಧಿಕಾರಿಗಳು ಆಹಾರ ಸುರಕ್ಷತೆಯ ನಿಯಮವನ್ನು ಜಾರಿಗೊಳಿಸಬೇಕು ಎಂದರು.

Also Read  ಪುತ್ತೂರು: ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು

ದಕ್ಷಿಣ ಕನ್ನಡದಲ್ಲಿ ತೊಗರಿ ಬೇಳೆ ಬಳಕೆ ಕಡಿಮೆ. ಅದನ್ನು ಪಡಿತರ ಗ್ರಾಹಕರು ಬಿಟ್ಟು ಹೋಗುವುದು ಗಮನಕ್ಕೆ ಬಂದಿದೆ. ಇದು ಪಡಿತರ ಅಂಗಡಿಯವರಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ತೊಗರಿ ಬೇಳೆಯನ್ನು ಶೂನ್ಯ ಮಾಡಿ ಅಕ್ಕಿ ಮಾತ್ರ ವಿತರಿಸಲು ಅವಕಾಶ ಇದೆ. ಇದನ್ನು ಎಲ್ಲಾ ನ್ಯಾಯಬೆಲೆ ಅಂಗಡಿಯವರು ಮಾಡಬೇಕು. ಸರ್ಕಾರದ ಯೋಜನೆಗಳು ತಳಮಟ್ಟದ ಫಲಾನುಭವಿಗಳು ತಲುಪಿಸುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕಿದೆ. ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಬಿಸಿಯೂಟ, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಸ್ಥಿತಿ ಗತಿ ಉತ್ತಮವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಾನುಷ್ಠಾನದ ಶ್ರಮ ನಿಜಕ್ಕೂ ಪ್ರಶಂಸನೀಯ ಎಂದರು. 

Also Read  ಕಡಬ: ಮಾಸ್ಕ್ ಧರಿಸಿಲ್ಲವೆಂದು 100 ರೂ. ದಂಡ ➤ ತನ್ನ ಅಹಂಕಾರದಿಂದ 2500 ರೂ. ತೆತ್ತ ಯುವಕ

ತೀವ್ರ ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ ಇಲ್ಲಿ ಇಲ್ಲವೇ ಇಲ್ಲ ಎನ್ನ ಬಹುದು. ಜಿಲ್ಲೆಯಲ್ಲಿ ಇಂತಹ 55 ಮಕ್ಕಳಿದ್ದಾರೆ. ಅದರಲ್ಲಿ 4 ಮಕ್ಕಳು ಚಿಕಿತ್ಸೆಯಲ್ಲಿ ಚೇತರಿಸಿಕೊಂಡಿದ್ದಾರೆ. ಮಿಕ್ಕ 51 ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಒಂದೇ ಕಾರಣವಲ್ಲದೆ  ಆನುವಂಶಿಕ ಕಾಯಿಲೆಗಳಿವೆ. ಹೃದಯ ಸಂಬಂಧಿ ಕಾಯಿಲೆಗಳಿವೆ. ಈ ಮಕ್ಕಳಿಗೆ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ನೀಡುವುದಾಗಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ವಿವರಿಸಿದರು.  ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಆಯೋಗದ ಸೂಚನೆಗಳನ್ನು ಹಾಗೂ ಸಲಹೆಗಳನ್ನು ಅಳವಡಿಸಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಣೆಗೆ ವಾತಾವರಣ ಸೃಷ್ಟಿಸಲಾಗುವುದು ಎಂದು ಹೇಳಿದರು. ಆಯೋಗದ ಸದಸ್ಯರಾದ ವಿ.ಬಿ.ಪಾಟೀಲ್, ಡಿ.ಜಿ.ಹಸಬಿ, ಮಂಜುಳಾ ಬಾಯಿ, ಬಿ.ಎ.ಮಹಮ್ಮದ್ ಆಲಿ, ಅಪರ ಜಿಲ್ಲಾಧಿಕಾರಿ ಕುಮಾರ್ ಸಭೆಯಲ್ಲಿ ಪಾಲ್ಗೊಂಡರು.

error: Content is protected !!
Scroll to Top