(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜು. 29. ಬೈಕೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು – ಕುಂದಾಪುರ ಹೆದ್ದಾರಿಯ ಪಡುಬಿದ್ರೆ ಸಮೀಪದ ಬೀಡು ಎಂಬಲ್ಲಿ ನಡೆದಿದೆ.
ಮೃತ ಬೈಕ್ ಸವಾರನನ್ನು ಮುಲ್ಕಿಯ ಕಿಲ್ಪಾಡಿ ನಿವಾಸಿ ಅವಿನಾಶ್ ದೇವಾಡಿಗ (28) ಎಂದು ಗುರುತಿಸಲಾಗಿದೆ. ಅವಿನಾಶ್ ಚಲಾಯಿಸುತ್ತಿದ್ದ ಯಮಹಾ FZ ಬೈಕ್ ಖಾಸಗಿ ಬಸ್‍ಗೆ ಢಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬೈಕ್ ಬಸ್ಸಿನ ಒಳಗಡೆ ಸಿಲುಕಿಕೊಂಡಿದೆ. ಸವಾರನ ನಿಯಂತ್ರಣ ತಪ್ಪಿದ ಬೈಕ್ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.