ಜ.27ರಂದು ಬೆಂಗಳೂರಿನಲ್ಲಿ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ

(ನ್ಯೂಸ್ ಕಡಬ) newskadaba.com.,ಜ.12. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ಆಶ್ರಯದಲ್ಲಿ ಬೃಹತ್ ಘೋಷಣಾ ಸಮಾವೇಶ ಬೆಂಗಳೂರಿನ ಹಜ್ ಕಮಿಟಿ ವಠಾರದಲ್ಲಿ ಜ.27ನೇ ಭಾನುವಾರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಹೇಳಿದರು.ಅವರು ಶನಿವಾರ ಕಡಬದ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಒಂದು ಸಮಾವೇಶದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉಲಾಮ ಶಿರೋಮಣಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುಸ್ಲಿಂ ಜಮಾಅತ್ ಕೌನ್ಸಿಲ್ ಮುಸ್ಲಿಂ ಸಮುದಾಯದ ಅತ್ಯಂತ ಬಲಿಷ್ಠವಾದ ಒಂದು ಆಡಳಿತ ಘಟಕವಾಗಿದೆ. ಮೊಹಲ್ಲಾ ಜಮಾಅತ್‍ಗಳು ಈ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ, ಸಮುದಾಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪಡಿಸಲು ಸಾಧ್ಯ. ಆದರೆ ಇಂದಿನ ಬಹುತೇಕ ಮೊಹಲ್ಲಾಗಳು ಅನೇಕ ರೀತಿಯ ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಆಂತರಿಕ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು, ಅನಗತ್ಯ ಗೊಂದಲಗಳು ಮುಂತಾದವುಗಳಿಂದ ಸಮುದಾಯದ ಇತರ ಜನಾಂಗಗಳ ಮಧ್ಯೆ ತಲೆ ತಗ್ಗಿಸುವಂತಾಗಿದೆ. ಗುಲಾಮ ನಾಯಕತ್ವ ಮುಖಾಂತರ ಹಾಗೂ ಮೊಹಲ್ಲಾ ಆಡಳಿತದ ಬಗ್ಗೆ ಸರಿಯಾದ ತರಬೇತಿ ನೀಡಿ ನಾಯಕತ್ವದಲ್ಲಿ ಮೊಹಲ್ಲಾ ಆಡಳಿತದಲ್ಲಿ ಸುಧಾರಣೆ, ಜಮಾಅತ್‍ಗಳ ಧಾರ್ಮಿಕತೆ, ಶೈಕ್ಷಣಿಕ ಪ್ರಗತಿ, ಸಮುದಾಯಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಪಡೆದು ಬಳಸಿಕೊಳ್ಳುವುದು ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಸಂಘಟನೆ ಮುಖಾಂತರ ರಾಜ್ಯಾದ್ಯಂತ ಕಾರ್ಯ ಚಟುವಟಿಕೆ ಮಾಡಲಾಗುತ್ತಿದೆ.

ಕೆಲವು ಸುಧಾರಣೆಗಳಿಗಾಗಿ ರಾಜ್ಯ ಮಟ್ಟದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲು ಬೆಂಗಳೂರಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಒಂದು ಸಮಾವೇಶದಲ್ಲಿ ಸುಮಾರು 10ರಿಂದ 12 ಲಕ್ಷ ಜನ ಭಾಗವಹಿಸಲಿದ್ದಾರೆ. ಈ ಪೈಕಿ ಉಡುಪಿ ಹಾಗೂ ದ.ಕ. ಜಿಲ್ಲೆಯಿಂದ ಮೂರು ಲಕ್ಷ ಜನ ಭಾಗವಹಿಸಲಿದ್ದಾರೆಂದು ಸಯ್ಯದ್ ಮೀರಾ ಸಾಹೇಬ್ ಹೇಳಿದರು. ಈ ಸಮಾವೇಶದಲ್ಲಿ ಸುಲ್ತಾನುಲ್ ಉಲಾಮ ಶೇಖ್ ಅಬೂಬಕರ್ ಮುಸ್ಲಿಯಾರ್ ಸಾಹಿಬ್, ಮೌಲಾನ ಸಂಸುಲ್ ಹಕ್ ಖಾದ್ರಿ ಅಲ್ ಹುಸೈನಿ ವಲ್ ಹುಸೈನಿ, ಹಝರತ್ ಅಲಾಮ್ ಮೌಲಾನ ಅಬ್ದುಲ್ ಮುನ್ನಾನಿ ಮೀಯ ರಝ ಖಾನ್ ಖಾದ್ರಿ, ಮೌಲನಾ ಸಯ್ಯದ್ ನೂರಾನಿ ಮಿಯನ್ ಅಶ್ರಫಿ ಕಿಚಾವ್ಚ ಶರೀಫ್, ಮೌಲಾನ ನಝೀಬ್ ಹೈದರ್ ಮಿಯ ಬರ್ಕತಿ (ಮರ್‍ಹರ್ ಶರೀಫ್), ಮೌಲಾನ ಅಹ್ಮದ್ ನಕ್ಸಬಂಧಿ ಹೈದರಾಬಾದ್, ಸಾಜಿದ್ ನಸ್‍ಅದು ಸಯ್ಯದ್ ಫಝಲ್ ಕೋಯಮ್ಮ ಅಲ್-ಬುಕಾರಿ ಕಿಬ್ಲ ಉಲ್ಲಾಲ್, ಸರ್ ಖಾಝಿ ತಾಜುಲ್ ಫಕ್ವ – ಇ ಮೌಲಾನ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಭಾಗವಹಿಸಲಿದ್ದಾರೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಸಾಹು ಹಮಿದ್ ತಂಙಲ್, ಎಸ್.ಎಸ್.ಎಫ್. ಕಡಬ ಘಟಕದ ಅಧ್ಯಕ್ಷ ಮಹಮ್ಮದ್ ರಿಯಾಝ್ ಸಹದಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಸಖಾಫಿ, ಸುನ್ನಿ ಯುವಜನ ಸಂಘದ ಕಡಬ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಸಹದಿ, ಕೂರ ಮಸೀದಿ ಅಧ್ಯಕ್ಷ ಕೆ.ಅಬೂಬಕ್ಕರ್, ಎಸ್.ಜೆ.ಎಂ. ಕಡಬ ಅಧ್ಯಕ್ಷ ಸಂಶುದ್ದಿನ್ ಸಹದಿ, ಎಸ್.ವೈ.ಎಸ್. ಮಾಣಿ ಘಟಕದ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯ್ಯದ್, ಕಳಾರ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಡ್ಕಾಡಿ, ಕಡಬ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಆದಂ ಕುಂಡೋಳಿ, ಮಹಮ್ಮದ್ ನವಾಝ್ ಪನ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group