(ನ್ಯೂಸ್ ಕಡಬ) newskadaba.com ಧಾರ್ಮಿಕ, ಜು.27. ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವಂತಹ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಪಂಚಮಿ ಎಂದರೆ ಒಡ ಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲು ಎರೆದು ಆಚರಿಸುವ ಹಬ್ಬವಾಗಿದೆ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ನಾಗಪ್ಪನಿಗೆ ಹಲವು ವಿಧದ ಉಂಡೆಗಳು, ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ತಂಬಿಟ್ಟು, ಹಸಿ ಅಕ್ಕಿ ಮತ್ತೆ ಬೆಲ್ಲ ಬೆರೆಸಿ ಮಾಡಿದ ತಂಬಿಟ್ಟಿನ ನೈವೇದ್ಯವನ್ನು ಮಾಡಲಾಗುತ್ತದೆ.
ಅಣ್ಣ ತಂಗಿಯ ಪ್ರೀತಿ ಸಾರುವಂತಹ ಈ ಹಬ್ಬದಲ್ಲಿ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಆಯಸ್ಸು, ಆರೋಗ್ಯ ಮತ್ತು ಸಕಲ ಸುಖಗಳನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳವ ದಿನವಾಗಿದೆ. ಹುತ್ತಕ್ಕೆ ಹಾಲು ಎರೆದು, ಹುತ್ತದ ಮಣ್ಣನ್ನು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿ ಒಳ್ಳೆದಾಗಲಿ ಎಂದು ಹಾರೈಸುತ್ತಾರೆ. ನಾಗದೇವತೆಗಳಿಗೆ ಅನುಗ್ರಹ ಮತ್ತು ನಿಗ್ರಹ ಮಾಡುವಂತಹ ಸಾಮರ್ಥ್ಯ ಇರುವುದರಿಂದ ಸರ್ಪ ಪೂಜೆಗೆ ವಿಶೇಷವಾದ ಮಾನ್ಯತೆ ನೀಡಲಾಗಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಮತ್ತಷ್ಟು ವಿಶಿಷ್ಟವಾಗಿರುತ್ತದೆ. ಈ ಹಬ್ಬದ ದಿನ ಮನೆಗಳಲ್ಲಿ ಮತ್ತು ಊರಿನಲ್ಲಿ ಜೋಕಾಲಿ ಕಟ್ಟಿ ಹಾಡುವಂತಹ ವಿಶಿಷ್ಟ ಪದ್ಧತಿ ಇದೆ. ಹಿರಿಯರು ಕಿರಿಯರು ಭೇದವಿಲ್ಲದೇ ಜೋಕಾಲಿ ಹಾಡುತ್ತಾರೆ. ನಾಗರಪಂಚಮಿ ಹಬ್ಬ ಉತ್ತರ ಕರ್ನಾಟಕ ಭಾಗದಲ್ಲಿ ಜೋಕಾಲಿ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ. ನಾಗ ಪೂಜೆ ಮಾಡಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿದರೆ ಇಡೀ ಕುಟುಂಬವನ್ನು ನಾಗಪ್ಪ ಕಾಯ್ತಾನೆ ಎಂಬ ನಂಬಿಕೆ ಇದೆ. ಪೌರಾಣಿಕ ಹಿನ್ನೆಲೆ ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿಯಾ ನಾಗನನ್ನು ಮರ್ದನ ಮಾಡಿದ ದಿವಸ. ಅದೇ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಬಾಲ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಯುಮುನಾ ನದಿಯಲ್ಲಿ ಕಾಳಿ ಎಂಬ ನಾಗ ವಾಸವಾಗಿದ್ದು, ವಿಷಭರಿತವಾಗಿರುತ್ತದೆ. ಕೃಷ್ಣ ನದಿಗೆ ಬಿದ್ದಾಗ ಕಾಳಿಯ ಎಂಬ ಹಾವು ಅವನ ಮೇಲೆ ದಾಳಿ ಮಾಡುತ್ತದೆ. ಆಗ ಕೃಷ್ಣನು ಕಾಳಿಯ ವಿರುದ್ಧ ಹೋರಾಟ ಮಾಡುತ್ತಾನೆ. ಈ ವೇಳೆ ಕಾಳಿಯ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಿಗೆ ಬರುತ್ತದೆ. ಆಗ ಕಾಳಿಯ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಕೇಳಿಕೊಳ್ಳುತ್ತದೆ. ಕಾಳಿಯನ್ನು ಕ್ಷಮಿಸಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗಾಗಿ, ಕೃಷ್ಣನು ಕಾಳಿಯಾ ನಾಗನನ್ನು ಮರ್ದನ ಮಾಡಿದ ದಿವಸದಂದು ನಾಗರಪಂಚಮಿ ಮಾಡಲಾಗುತ್ತದೆ.
ಇನ್ನು ಮತ್ತೊಂದು ಕಥೆಯೆಂದರೆ, ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ರಾಜ ಜನಮೇಜಯ ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಮಾಡಲು ಆರಂಭಿಸುತ್ತಾನೆ. ಆ ಯಜ್ಞಕ್ಕೆ ಎಲ್ಲಾ ಸರ್ಪಗಳು ಬಂದು ಬೀಳುತ್ತಿರುತ್ತವೆ. ಈ ಸಂದರ್ಭದಲ್ಲಿ ಸರ್ಪಗಳು ಪ್ರಾರ್ಥನೆ ಮಾಡಿಕೊಂಡಾಗ ಆಸ್ತಿಕ ಮುನಿಗಳು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಳ್ಳುತ್ತಾರೆ. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕ ಮುನಿಗಳು ಪ್ರಾಣಿಹಿಂಸೆ ಮಹಾಪಾಪವಾಗಿದ್ದು, ನೀವು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ಕೂಡಲೇ ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಳ್ಳುತ್ತಾರೆ. ರಾಜ ಜನಮೇಜಯನು ಆಸ್ತಿಕ ಮುನಿಗಳ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಆ ನಿಲ್ಲಿಸಿದ ದಿನವನ್ನೇ ನಾಗರಪಂಚಮಿ ಎಂದು ಕರೆಯಲಾಗುತ್ತದೆ.