ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.26. ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಸಕ್ತ ಕಾಲಘಟ್ಟದಲ್ಲಿ ಮುದ್ರಣಾ ಮಾಧ್ಯಮಕ್ಕೆ ಸವಾಲಾಗಿದ್ದು, ವರದಿಗಾರರು ಕ್ಲಿಷ್ಟಕರ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜದ ಅಭಿವೃದ್ದಿಗೆ ಪುರಕವಾದ ವರದಿ ನೀಡಿದಾಗ ಪತ್ರಕರ್ತನ ಘನತೆ ಹೆಚ್ಚುತ್ತದೆ ಎಂದು ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ಹೇಳಿದರು.

ಅವರು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಬೆಳಕು ನೀಡುವ ವರದಿಗಳು ಬೇಕಾಗಿವೆ. ಕೆಲವೊಂದು ದೃಶ್ಯ ಮಾಧ್ಯಮಗಳು ಕುಟುಂಬ ಕಳಹದಂತಹ ವಿಚಾರಗಳನ್ನು ದಿನವಿಡೀ ಪ್ರಚಾರ ಮಾಡುತ್ತಿರುವುದರಿಂದ ಸಮಾಜದಲ್ಲಿ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು. ಅತಿಥಿಯಾಗಿದ್ದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪುರ್ವಾಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಪತ್ರಕರ್ತರು ಹೊಸತನವನ್ನು ಸಮಾಜಕ್ಕೆ ನೀಡುವಲ್ಲಿ ಸಫಲರಾಗಬೇಕು. ಪ್ರತಿನಿತ್ಯದ ಎಲ್ಲಾ ಆಗು ಹೋಗುಗಳನ್ನು ತಿಳಿಯಬೇಕಾದರೆ ಅದು ಮಾಧ್ಯಮದಿಂದ ಸಾಧ್ಯ. ವರದಿಗಳು ಒಂದು ವರ್ಗಕ್ಕೆ ಸೀಮಿತವಾಗದೆ ಸಮಾಜ ಬದಲಾವಣೆಯ ಸುದ್ದಿಗಳು ಹೆಚ್ಚು ಪ್ರಕಟಗೊಂಡಾಗ ಸಮಾಜ ಎಚ್ಚರದಲ್ಲಿರುತ್ತದೆ. ವರದಿಗಾರಿಕೆಯಲ್ಲಿ ಎಷ್ಟೇ ಪರಿಣಿತಿ ಪಡೆದರೂ ವಸ್ತು ವಿಚಾರವನ್ನು ಅರ್ಥೈಸಿಕೊಂಡು ಮಾಡುವಂತಹ ಸ್ವಂತಿಕೆಯ ವರದಿಗಳನ್ನು ಓದುಗರು ಮೆಚ್ಚಿಕೊಳ್ಳುತ್ತಾರೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಲ ಡಾ.ಸಂಕೀರ್ತ್ ಹೆಬ್ಬಾರ್ ಮಾತನಾಡಿ, ದೇಶದಲ್ಲಿನ ಪತ್ರಿಕೆಯ ದರ ವಿದೇಶದಲ್ಲಿನ ಪತ್ರಿಕೆಯ ದರಕ್ಕಿಂತ ಬಹಳಷ್ಟು ಕಡಿಮೆಯಿದೆ. ಜನರು ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಪತ್ರಿಕೆ ಬೆಳೆಯುತ್ತದೆ ಎಂದರು.

Also Read  ಮರ್ದಾಳ: ಜೇಸಿಐ ವತಿಯಿಂದ ಕ್ರೀಡಾಕೂಟ

ಜಿಲ್ಲಾ ಪತ್ರಕರ್ತ ಸಂಘದ ಸದಸ್ಯ ಸಿದ್ದಿಕ್ ನೀರಾಜೆ, ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ ಕಾಲೇಜಿನ ಪ್ರಾಯೋಗಿಕ ಪತ್ರಿಕೆ “ತೇರು” ಬಿತ್ತಿ ಪತ್ರ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊೖಲ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎನ್.ಕೆ. ನಾಗರಾಜ್ ವಂದಿಸಿದರು. ಉಪನ್ಯಾಸಕಿ ಮಮತಾ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಪಿ ಬಿ ಹರೀಶ್ ರೈ ಸಂವಾದ ನಡೆಸಿಕೊಟ್ಟರು.

error: Content is protected !!
Scroll to Top