(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬರ್ಚಿನಹಳ್ಳ ಸಮೀಪ ನಡೆದಿದೆ.
ಮೃತ ಚಾಲಕನನ್ನು ತಮಿಳುನಾಡಿನ ಹೊಸೂರು ತಾಲೂಕಿನ ಮುತ್ತಪ್ಪ ಎಂಬವರ ಪುತ್ರ ವೆಂಕಟರಾಜು ಎಂದು ಗುರುತಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಅವರು ಶನಿವಾರದಂದು ಪೂಜೆ ಮುಗಿಸಿ ವಾಪಸ್ ಊರಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಭಾನುವಾರದಂದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯು ಕಾಂಕ್ರಿಟೀಕರಣಗೊಂಡು ಕಳೆದ ಮಳೆಗಾಲದಲ್ಲಿ ರಸ್ತೆಯ ಅರ್ಧ ಭಾಗ ಕುಸಿದಿದ್ದು, ಕುಸಿದಿರುವ ಭಾಗಕ್ಕೆ ಹೆದ್ದಾರಿಯಲ್ಲಿ ಅಡ್ಡಲಾಗಿ ಇಟ್ಟಿಗೆಗಳನ್ನಿಟ್ಟು ತಡೆಗೋಡೆ ನಿರ್ಮಿಸಿ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇವರ ಕಾರು ತಡೆಗೋಡೆಗೆ ಢಿಕ್ಕಿ ಹೊಡೆದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮೇಲಕ್ಕೆತ್ತಿ ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಗುಂಡ್ಯ ನಿವಾಸಿ ಸುಭಾಷ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.