(ನ್ಯೂಸ್ ಕಡಬ) newskadaba.com ಕಡಬ, ನ.08. ಕೊಯಿಲ ಸರಕಾರಿ ಪಶು ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣಕ್ಕೆಂದು ದಾಸ್ತಾನು ಇರಿಸಲಾಗಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವುಗೈದಿರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.
ಕೊಯಿಲ ಗ್ರಾಮದ ಕೊಯಿಲ ಪಶುಸಂಗೋಪನಾ (K.C. ಫಾರಂ.) ಇಲಾಖೆಯ ಜಮೀನಿನಲ್ಲಿ ಕರ್ನಾಟಕ ಸರಕಾರದ ಪಶು ವೈದ್ಯಕೀಯ ಕಾಲೇಜು ಕಟ್ಟಡವನ್ನು ಬೆಂಗಳೂರಿನ ಸ್ಟಾರ್ ಬಿಲ್ಡರ್ರ್ಸ್ ಸಂಸ್ಥೆಯು ಗುತ್ತಿಗೆಯ ಆಧಾರದಲ್ಲಿ 2 ವರ್ಷಗಳಿಂದ ಕಟ್ಟಡ ಕಾಮಗಾರಿ ಕೆಲಸವನ್ನು ಮಾಡುತ್ತಿದ್ದು, ಕಟ್ಟಡ ಕಾಮಗಾರಿಗಾಗಿ ದಾಸ್ತಾನು ಇರಿಸಿದ್ದ 500 ಕಬ್ಬಿಣದ ಜಾಕ್ ಪೈಪ್, 700 ಕಬ್ಬಿಣದ ಸೆಂಟ್ರಿಂಗ್ ಪ್ಲೇಟ್ ಗಳು ಸೇರಿದಂತೆ ಒಟ್ಟು ಮೌಲ್ಯ 4 ಲಕ್ಷ ರೂಪಾಯಿ ಮೌಲ್ಯದ ಸೆಂಟ್ರಿಂಗ್ ಸಾಮಾಗ್ರಿಗಳು ಕಳವು ಆಗಿರುವುದು ಮಂಗಳವಾರದಂದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಸ್ಥೆಯ ಗುತ್ತಿಗೆದಾರ ಮಹಮ್ಮದ್ ಅಶ್ರಫ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.