(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.12. ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಟ್ಲ ಕಡೆಯಿಂದ ಉಪ್ಪಿನಂಗಡಿಯ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌ಐ ನಂದಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳು ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಮೈದಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಪರಾಹ್ನ ವಾಹನ ತಪಾಸಣೆ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಆಟೋರಿಕ್ಷಾ ಹಾಗೂ ಬೈಕನ್ನು ಪುತ್ತೂರು ತಾಲೂಕು ದಂಡಾಧಿಕಾರಿ ಶಿವಶಂಕರ್ ರವರು ಹಾಗೂ ಪಂಚರ ಸಮಕ್ಷಮ ತಪಾಸಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 4.100 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ನಿವಾಸಿ ಮಹಮ್ಮದ್ ಎಂ.ಎಸ್. ಎಂಬವರ ಪುತ್ರ ಅಬೂಬಕ್ಕರ್ ಸಿದ್ದಿಕ್(30), ಬಂಟ್ವಾಳ ತಾಲೂಕಿನ ಬೋಳಂತೂರು ನಿವಾಸಿ ದಿ| ಸುಲೈಮಾನ್ ಎಂಬವರ ಪುತ್ರ ಮಹಮ್ಮದ್ ರಫೀಕ್(32) ಹಾಗೂ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕುಕ್ಕಿನಡ್ಕ ನಿವಾಸಿ ದಿ| ಆದಂ ಎಂಬವರ ಪುತ್ರ ಅಜೀದ್(33) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 2, ಲಕ್ಷ 41 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ. ಆರ್. ರವೀಕಾಂತೇಗೌಡ, ಹೆಚ್ಚುವರಿ ಪೊಲೀಸ್ ಆಧೀಕ್ಷಕರಾದ ಸಜೀತ್ ಹಾಗೂ ಪುತ್ತೂರು ಉಪ-ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಗೋಪಾಲ ನಾಯ್ಕ್ ಎಂ. ರವರ ನಿರ್ದೇಶನದಂತೆ ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ನಂದಕುಮಾರ್ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ರುಕ್ಮ ನಾಯ್ಕ್, ಹರೀಶ್ಚಂದ್ರ, ದೇವದಾಸ್, ಇರ್ಷಾದ್ ಪಿ, ಮನೋಹರ ಪಿ.ಸಿ, ವಿನಾಯಕ, ಜಗದೀಶ್ ಹಾಗೂ ಚಾಲಕರಾದ ನಾರಾಯಣ ಗೌಡ ಭಾಗವಹಿಸಿದ್ದರು.