(ನ್ಯೂಸ್ ಕಡಬ) newskadaba.com ಮಂಗಳೂರು, ಅ.03. ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯು ಕೊನೆಗೂ ಬಸ್ ಸಂಚಾರಕ್ಕೆ ಮುಕ್ತವಾಗಿದ್ದು, ಇಂದಿನಿಂದ ಪ್ರಯಾಣಿಕ ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿವೆ.
ಆಗಸ್ಟ್ 14 ರ ನಂತರ ಘಾಟಿಯ ಅಲ್ಲಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಹೆದ್ದಾರಿಯ ಮೇಲೆ ಕುಸಿದ ಮಣ್ಣು ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಗಿದಿತ್ತಾದರೂ ರಸ್ತೆಯ ತಡೆಗೋಡೆ ಹಲವೆಡೆ ಕುಸಿದು ಹೆದ್ದಾರಿಯ ಅಡಿಭಾಗದ ಮಣ್ಣು ನೀರುಪಾಲಾಗಿದ್ದರಿಂದ ಪುನರ್ ನಿರ್ಮಾಣ ಕೆಲಸದಿಂದಾಗಿ ಸಂಚಾರಕ್ಕೆ ವಿಳಂಬವಾಗಿತ್ತು. ಸಾರ್ವಜನಿಕರು ಪ್ರತಿಭಟನೆ ನಡೆಸುವ ಮೂಲಕ ಒತ್ತಡ ಹಾಕುತ್ತಿದ್ದುದರಿಂದ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ತಾತ್ಕಾಲಿಕವಾಗಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮುಂದಿನ ಕೆಲವೇ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಎಲ್ಲಾ ರೀತಿಯ ಘನ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.