(ನ್ಯೂಸ್ ಕಡಬ) newskadaba.com ಆಲಂಕಾರು, ಸೆ.14. ಇಪ್ಪತ್ತು ದಿನದ ಮೊದಲು ಸುರಿದ ಭಾರಿ ಮಳೆಗೆ ರೈತರ ಭತ್ತ ಕೃಷಿಯು ನೆರೆ ನೀರಿನಿಂದಾಗಿ ಅಪಾರ ಪ್ರಮಾಣದಲ್ಲಿ ಕೊಳೆತು ಹೋದರೆ, ಇದೀಗ ಅಳಿದುಳಿದ ಭತ್ತದ ಗದ್ದೆಯು ಬೆಂಕಿ ರೋಗದಿಂದ ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ.
ನಾಟಿ ಮಾಡಿ ಕಾಯಿ ಕಟ್ಟುವ ಹಂತದಲ್ಲಿರುವ ಸುಮಾರು ಎರಡು ತಿಂಗಳ ಅವಧಿಯ ಪ್ಶೆರಿಗೆ ಇದೀಗ ಬೆಂಕಿ ರೋಗ ಕಾಣಿಸಿಕೊಂಡಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ನಡುಮನೆ, ಸೇರಿದಂತೆ ಕುಮಾರಧಾರ ನದಿ ತಟದಲ್ಲಿರುವ ಬುಡೇರಿಯಾ, ಪಜ್ಜಡ್ಕ, ಪೊಯ್ಯಲಡ್ಡ, ಶರವೂರು ಮುಂತಾದ ಪ್ರದೇಶದಲ್ಲಿ ಈ ರೋಗ ಅತೀ ಹೆಚ್ಚು ಕಾಣಿಸಿಕೊಂಡಿದೆ. ಕುಮಾರಧಾರ ನದಿ ತಟದಲ್ಲಿಯೇ ಅಪಾರ ಪ್ರಮಾಣದ ಭತ್ತದ ಗದ್ದೆಗಳಿದ್ದು ಪ್ರತೀ ವರ್ಷವು ನೆರೆ ನೀರು ಆಕ್ರಮಿಸುವುದು ಸಹಜವಾಗಿತ್ತು. ಬಂದ ನೆರೆ ನೀರು ಮೂರು ಅಥವಾ ನಾಲ್ಕು ದಿನ ಭತ್ತದ ಗದ್ದೆಯಲ್ಲಿದ್ದು ಇಳಿಮುಖವಾಗುತ್ತಿತ್ತು. ಇದರಿಂದ ಭತ್ತದ ಕೃಷಿಗೆ ಯಾವ ತೊಂದರೆಯು ಆಗುತ್ತಿರಲಿಲ್ಲ. ಆದರೆ ಈ ಬಾರಿ ಏರಿದ ನೆರ ಹತ್ತು ದಿನ ಗದ್ದೆಯಲ್ಲೇ ನಿಂತ ಕಾರಣ ನಾಟಿ ಮಾಡಿದ ಪೈರು ಸಂಪೂರ್ಣ ಕೊಳೆತು ನಾಶವಾಗಿತ್ತು. ಅಲ್ಲದೆ ಇದೀಗ ಅಳಿದುಳಿದ ಗದ್ದೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು ರೈತಾಪಿ ಜನತೆಯನು ಇನ್ನಷ್ಟು ಚಿಂತೆಗೀಡು ಮಾಡಿದೆ. ಕಡಬ ತಾಲೂಕಿನ ಆಲಂಕಾರು ಒಂದೇ ಗ್ರಾಮದಲ್ಲಿ 17 ಎಕ್ರೆ ಗದ್ದೆಯು ನೆರೆ ನೀರಿನಿಂದಾಗಿ ನಾಟಿ ಮಾಡಿದ ಪೈರು ಸಂಪೂರ್ಣ ಕೊಳೆತು ಹೋಗಿತ್ತು. ಇದೀಗ ಕೊಳೆತು ಹೋದ ಗದ್ದೆಯ ಪ್ರಮಾಣದ ಎರಡು ಪಟ್ಟು ಗದ್ದೆಯು ಬೆಂಕಿ ರೋಗಕ್ಕೆ ಬಲಿಯಾಗಿರುವುದು ಆತಂಕದ ವಿಚಾರವಾಗಿದೆ.
ಅವನತಿಯಲ್ಲಿರುವ ಭತ್ತದ ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ದುಬಾರಿ ಸಂಬಳ ನೀಡಿ ನಾಟಿ ಕಾರ್ಯ ಮಾಡಿಸಬೇಕಾಗಿದೆ. ನೆರೆ ನೀರಿನಿಂದಾಗಿ ಕೊಳೆತು ಹೋದ ಗದ್ದೆಗಳಿಗೆ ಮರುನಾಟಿ ಇದೀಗ ಮತ್ತೆ ಮಾಡಬೇಕಾಗಿದೆ. ಇದರೊಂದಿಗೆ ಅಲ್ಪ ಸ್ವಲ್ಪ ಉಳಿದ ಗದ್ದೆಗಳು ಬೆಂಕಿ ರೋಗಕ್ಕೆ ಬಲಿಯಾಗಿರುವ್ಯದರಿಂದ ಆ ಗದ್ದೆಯಲ್ಲಿಯು ಸಮರ್ಪಕ ಬೆಳೆ ಬರುವುದು ಕಷ್ಟ ಸಾಧ್ಯ. ಹಾಗಾಗಿ ಬೆಂಕಿ ರೋಗ ಭಾದಿತ ಗದ್ದೆಗಳನ್ನು ಮರುನಾಟಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನಿರೀಕ್ಷಿತ ಫಸಲು ಪಡೆಯಲು ಅಸಾಧ್ಯವಾಗಿದೆ.
ಈಗಾಗಲೇ ನೆರ ನೀರಿನಿಂದಾಗಿ ಕೊಳೆತು ಹೋಗಿರುವ ಗದ್ದೆಗಳಲ್ಲಿ ಮೊದಲ ಅವಧಿಯ ಬೆಳೆ(ಏನೇಲು) ಇದರ ಫಸಲನ್ನು ರೈತರು ಕಳೆದುಕೊಂಡಿದ್ದಾರೆ. ಮುಂದೆ ಸುಗ್ಗಿಯ ಕಾಲಾ ಮಾನಕ್ಕೆ ಸರಿಯಾಗುವಂತೆ ನಾಟಿ ಕಾರ್ಯ ಮಾಡಬೇಕಾಗಿದೆ. ಆದರೆ ಅಲ್ಲಿಯವರೆಗೆ ಗದ್ದೆಯನ್ನು ಖಾಲಿ ಬಿಡುವ ಹಾಗಿಲ್ಲ. ಈ ಕಾರಣಕ್ಕಾಗಿ ಮುಂದಿನ ಹದಿನೈದು ದಿನಗಳಲ್ಲೇ ಮರು ನಾಟಿಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಇದರ ಕಟಾವು ಕಾರ್ಯವು ಮುಂದಿನ ಮೂರು ತಿಂಗಳ ಬಳಿಕ ನಡೆಯುತ್ತದೆ. ಆವೇಳೆ ಈಗಾಗಲೇ ಸರಿಯಿದ್ದ ಗದ್ದೆಯ ಪೈರಿನ ಕಟಾವು ಕಟಾವು ಕಾರ್ಯ ಮುಗಿರುತ್ತದೆ. ಈ ಸಮಯದಲ್ಲಿ ಈಗ ನಾಟಿ ಮಾಡಿರುವ ಗದ್ದೆಗಳಿಗೆ ಕಾಡು ಪ್ರಾಣಿ ಪಕ್ಷಿಗಳ ದಾಳಿಯಾಗುವ ಸಂಭವವಿದ್ದು ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಲಿದ್ದಾರೆ.
ವಿಪರೀತ ಮಳೆಯ ಕಾರಣ ಮಣ್ಣಿನಲ್ಲಿ ವಿಟಾಮೀನ್ ಕೊರತೆ ಉಂಟಾಗಿ ಬೆಂಕಿ ರೋಗ ಕಾಣಿಸಿಕೊಳ್ಳುತ್ತದೆ. ಕಡಬ ತಾಲೂಕಿನ ಆಲಂಕಾರಿನಲ್ಲಿ ಪ್ರಥಮವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದರ ನಿಯಂತ್ರಣಕ್ಕೆ ಕಾರ್ಬನ್ ಡೈಜಿನ್ ಕೀಟನಾಶಕವನ್ನು ಒಂದು ಲೀಟರ್‍ಗೆ ಒಂದು ಎಂಎಲ್ ಸಮಪ್ರಮಾಣದಲ್ಲಿ ಬೆರೆಸಿ ಸಿಂಪಡಣೆ ಮಾಡುವುದು, ಅಥವಾ ಯೂರಿಯಾ ಮತ್ತು ಪೊಟಾಶನ್ನು ಸಮಪ್ರಮಾಣದಲ್ಲಿ ಬೆರೆಸಿ ಪೈರಿಗೆ ಹಾಕುವುದು. ಅಲ್ಲದೆ ಎನ್‍ಪಿಕೆ. 19-19-19ನ್ನು 1ಲೀ ನೀರಿಗೆ 5ಗ್ರಾಂನ್ನು ಸಮಪ್ರಮಾಣದಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ನಿಯಂತ್ರಣ ಸಾಧ್ಯ. ಜೊತೆಗೆ ಅಲ್ಲಲ್ಲಿ ಪೈರಿಗೆ ಎಲೆ ಮಡಚುವ ರೋಗವು ಕಾಣಿಸಿಕೊಂಡಿದ್ದು ಇದರ ನಿಯಂತ್ರಣಕ್ಕೆ ಕ್ಲೋರೋಪೋಯಿರಿಪಾಸ್ ಮತ್ತು ಎಕೋಲೆಕ್ಸ್‍ನು 1ಲೀ ನೀರಿಗೆ 2ಎಂಎಲ್ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸೀಪಡಿಸುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಕಡಬ ಹೋಬಳಿ ಸಹಾಯಕ ಕ್ರಷಿ ಅಧಿಕಾರಿ ತಿಮ್ಮಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.
ವರದಿ: ಸದಾನಂದ ಆಲಂಕಾರು