(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.08. ಮಾರಾಟಕ್ಕೆಂದು ಅಂಗಡಿಯ ಮುಂದೆ ತೂಗುಹಾಕಿದ್ದ ಬೆಲೆಬಾಳುವ ಜರ್ಕೀನ್ ಕದ್ದ ಕಳ್ಳನೋರ್ವ ಅದೇ ಅಂಗಡಿಯ ಮಾಲಕರ ಕಾರಿಗೆ ಕೈ ಹಿಡಿದು ಲಿಫ್ಟ್ ಕೇಳಿ ಪೊಲೀಸರ ಅತಿಥಿಯಾದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕರ್ವೇಲ್ ನಿವಾಸಿ ಅಬೂಬಕ್ಕರ್ ಎಂಬವರ ‘ನಿಹಾ ಡ್ರೆಸ್ಸಸ್ಸ್’ ಎಂಬ ಜವಳಿ ಅಂಗಡಿಯೆದುರು ಉತ್ತಮ ಗುಣಮಟ್ಟದ ಜರ್ಕಿನ್‌ವೊಂದನ್ನು ತೂಗು ಹಾಕಲಾಗಿತ್ತು. ಸಂಜೆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಖತರ್ನಾಕ್ ಕಳ್ಳನೋರ್ವ ಇದನ್ನು ಎಗರಿಸಿದ್ದ. ರಾತ್ರಿ ಅಂಗಡಿ ಬಂದ್ ಮಾಡುವ ಸಮಯದಲ್ಲಿ ಜರ್ಕೀನ್ ಇಲ್ಲದ್ದನ್ನು ಗಮನಿಸಿದ ಅಂಗಡಿ ಮಾಲಕರು ಸಿಸಿ ಕ್ಯಾಮರಾದಲ್ಲಿ ಹುಡುಕಾಡಿದಾಗ ಅಪರಿಚಿತ ಕಳ್ಳನೋರ್ವ ಜರ್ಕಿನ್ ಎಗರಿಸುವುದು ಕಂಡುಬಂದಿದೆ. ಆದರೆ ಆ ಕಳ್ಳ ಅಪರಿಚಿತನಾಗಿದ್ದರಿಂದ ಇದನ್ನು ಪತ್ತೆ ಮಾಡಲು ಅಸಾಧ್ಯವೆಂದು ಅವರು ಸುಮ್ಮನಿದ್ದರು.
ರಾತ್ರಿ ಅಂಗಡಿ ಬಂದ್ ಮಾಡಿ ತನ್ನ ಮನೆಗೆ ಹೊರಟ ಅಬೂಬಕ್ಕರ್ ರವರ ಕಾರಿಗೆ ಅದೇ ಜರ್ಕಿನ್ ತೊಟ್ಟ ಅಪರಿಚಿತ ವ್ಯಕ್ತಿಯೋರ್ವ ಕೈ ಹಿಡಿದು ತನ್ನನ್ನು ಅಬ್ದುಲ್ ಗಫೂರ್ ಎಂದು ಪರಿಚಯಿಸಿಕೊಂಡು ಸತ್ತಿಕ್ಕಲ್ ವರೆಗೆ ಲಿಫ್ಟ್ ಕೇಳಿದ್ದ. ಜರ್ಕೀನ್ ಕಳ್ಳತನ ನಡೆಸಿ, ತನ್ನ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿ ಈತನೇ ಎಂಬುದು ಅವರಿಗೆ ಖಾತ್ರಿಯಾಗಿ ಕಾರಿನಲ್ಲಿ ಕುಳ್ಳಿರಿಸಿದ ಇವರು ಬುದ್ದಿವಂತಿಕೆಯಿಂದ ಸ್ವಲ್ಪ ಮುಂದಕ್ಕೆ ಕಾರು ಚಲಾಯಿಸಿ ತಾನು ಮನೆಗೆ ತೆಗೆದುಕೊಂಡು ಹೋಗಬೇಕೆಂದು ಖರೀದಿಸಿಟ್ಟಿದ್ದ ವಸ್ತುವೊಂದು ಮರೆತು ಉಪ್ಪಿನಂಗಡಿಯಲ್ಲಿ ಬಾಕಿಯಾಗಿದ್ದು, ಅದನ್ನು ತಗೊಂಡು ಹೋಗೋಣವೆಂದು ಕಳ್ಳನನ್ನು ನೇರವಾಗಿ ಉಪ್ಪಿನಂಗಡಿ ಠಾಣೆಗೆ ಕರೆದುಕೊಂಡು ಬಂದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಪೊಲೀಸರ ಬಲೆಯಲ್ಲಿ ಸಿಲುಕಿರುವುದನ್ನು ಮನಗಂಡ ಕಳ್ಳ ತನ್ನಲ್ಲಿದ್ದ ಹಲವು ಸಿಮ್ ಕಾರ್ಡ್ ಗಳನ್ನು ತುಂಡರಿಸತೊಡಗಿದ್ದು, ಸಂದೇಹಗೊಂಡ ಪೊಲೀಸರು ಮತ್ತಷ್ಟು ವಿಚಾರಿಸಿದಾಗ ಆತನಲ್ಲಿ ಕಳ್ಳತನಕ್ಕೆ ಬಳಸುವ ಹಲವು ಪರಿಕರಗಳು ಪತ್ತೆಯಾಗಿದೆ ಎನ್ನಲಾಗಿದೆ. ಅಬೂಬಕ್ಕರ್ ಅವರ ಸಮಯಪ್ರಜ್ಞೆಯಿಂದ ಖತರ್ನಾಕ್ ಕಳ್ಳನೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.