(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.03. ಇಲ್ಲಿನ ಇಚಿಲಂಪಾಡಿ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಕಳೆದ ಆರು ದಿನಗಳ ಹಿಂದೆ ಮೃತಪಟ್ಟ ಯುವಕನ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಇದೀಗ ಆತಂಕಗೊಂಡಿದ್ದು, ಆಂಟಿ ರೇಬಿಸ್ ಇಂಜೆಕ್ಷನ್ ಚುಚ್ಚಿಸಿಕೊಳ್ಳುತ್ತಿದ್ದಾರೆ.
ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಇಚ್ಲಂಪಾಡಿಯ ಕಾಯರ್ತಡ್ಕ ನಿವಾಸಿ ಆನಂದ ಪೂಜಾರಿ ಎಂಬವರ ಪುತ್ರ ಆಶಿತ್ ಪೂಜಾರಿ(24) ಹಠಾತ್ ಅನಾರೋಗ್ಯಕ್ಕೀಡಾಗಿ ಆಗಸ್ಟ್ 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಶಿತ್ ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಮನೆಯವರಿಗೆ ತಿಳಿಸಿ ಮೃತದೇಹವನ್ನು ಪ್ಯಾಕ್ ಮಾಡಿಕೊಟ್ಟಿದ್ದು ಮನೆಯಲ್ಲಿ ಮೃತದೇಹಕ್ಕೆ ನೀರು ಬಿಟ್ಟು ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯುವಂತೆ ಸೂಚಿಸಿದ್ದರೆನ್ನಲಾಗಿದೆ. ಆದರೆ ಮನೆಯವರು ಸಹಜವಾಗಿಯೇ ಅಂತ್ಯಕ್ರಿಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಊರವರು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಂದಿ ಮೃತರ ಅಂತಿಮ ದರ್ಶನಗೈದಿದ್ದರು. ಇದೀಗ ಆಶಿತ್ ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವ ಬಗ್ಗೆ ಗುಸುಗುಸು ಮಾತು ಪರಿಸರದಲ್ಲೆಡೆ ಹರಿದಾಡಿದ್ದು, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಆತಂಕಗೊಂಡಿದ್ದಾರೆ. ಮೃತದೇಹದ ಅಂತಿಮ ದರ್ಶನಕ್ಕೆ ಬಂದಿದ್ದ ಇನ್ನೂರಕ್ಕೂ ಹೆಚ್ಚು ಮಂದಿ ಇದೀಗ ‘ಆಂಟಿ ರೇಬಿಸ್ ಚುಚ್ಚುಮದ್ದು’ ಪಡೆದುಕೊಂಡಿದ್ದಾರೆ.