(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.01. ಶಿರಾಡಿ ಘಾಟ್ ನಲ್ಲಿ ಹಣ ಪಡೆದು ವಾಹನಗಳನ್ನು ಬಿಡುವುದರ ಬಗ್ಗೆ ಡಿಸಿ ಗೆ ದೂರು ನೀಡುತ್ತೇನೆ ಎಂದು ಪೊಲೀಸರಲ್ಲಿ ಹೇಳಿದ ಟ್ರಕ್ ಚಾಲಕರೊಬ್ಬರಲ್ಲಿ ಪೊಲೀಸ್ ಸಿಬ್ಬಂದಿಯೋರ್ವ ಡಿಸಿಗಲ್ಲ… ನಿಮ್ಮಪ್ಪನಿಗೆ ಹೇಳು ಎಂದು ಉದ್ದಟತನದಿಂದ ವರ್ತಿಸಿದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಶಿರಾಡಿಘಾಟ್ ರಸ್ತೆ ಬಂದ್ ಆಗಿರುವುದರಿಂದ ಹಲವು ಟ್ರಕ್ ಚಾಲಕರು ಅನ್ನ ನೀರಿಲ್ಲದೇ ಟ್ರಕ್ಗಳ ಕೆಳಗೆ ಪ್ಲಾಸ್ಟಿಕ್ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ. ಹೀಗಿರುವಾಗ ಪೊಲೀಸರು ಹಣ ಪಡೆದು ಕೆಲವು ವಾಹನಗಳನ್ನ ಬಿಡುತ್ತಿರುವುದು ಇತರ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿರಾಡಿ ಘಾಟ್ನಲ್ಲಿ ಸಕಲೇಶಪುರ ಕಡೆಯಿಂದ ಬರುವ 12 ಚಕ್ರದ ಟ್ರಕ್ ಗಳನ್ನು ಪೊಲೀಸರು ಹಣ ಪಡೆದು ಬಿಡುತ್ತಿದ್ದಾರೆ ಎಂದು ಟ್ರಕ್ ಚಾಲಕರೊಬ್ಬರು ಹಿಂದಿಯಲ್ಲಿ ಆರೋಪ ಮಾಡಿದ್ದು, ಪೊಲೀಸರು ಟ್ರಕ್ಗಳನ್ನು ಬಿಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವೀಡಿಯೋ ಮಾಡುವ ಸಂದರ್ಭದಲ್ಲಿ ಇದು ಕರ್ನಾಟಕ, ಕನ್ನಡ ಮಾತನಾಡು, ಡಿ.ಸಿ ಅಲ್ಲ ನಿಮ್ ಅಪ್ಪನಿಗೆ ಕಂಪ್ಲೆಂಟ್ ಮಾಡು ಹೋಗು ಎಂದು ಪೊಲೀಸ್ ಸಿಬ್ಬಂದಿಯೋರ್ವ ಜೋರಾಗಿ ಹೇಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.