(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.22. ಕಾರಿನಲ್ಲಿ ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿ, ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರದಂದು ನಡೆದಿದೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕು ಕೊಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಪಿ.ಜೆ. ಮ್ಯಾಥ್ಯೂ ಎಂಬವರ ಪುತ್ರ ಶೈಜು(26), ಕುಟ್ರುಪ್ಪಾಡಿ ಗ್ರಾಮದ ಅಲಾರ್ಮೆ ನಿವಾಸಿ ಕೆ.ಜೆ.ಅಬ್ರಹಾಂ ಎಂಬವರ ಪುತ್ರ ಸಜಿ ಎ.ಕೆ.(40), ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಕುಂಞಿಮೋನು ಎಂಬವರ ಪುತ್ರ ಸಜಿತ್ ಅಬ್ರಹಾಂ (32) ಹಾಗೂ ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ಬೋಳ ಕುರ್ಸ ಕಟ್ಟೆ ನಿವಾಸಿ ಥೋಮಸ್ ಎಂಬವರ ಪುತ್ರ ಸಂದೀಪ್(29) ಎಂದು ಗುರುತಿಸಲಾಗಿದೆ.
ಆರೋಪಿಗಳು ಜಿಂಕೆ ಕೊಂಬನ್ನು ಮಾರಾಟ ಮಾಡುವುದಕ್ಕಾಗಿ ಕಾರ್ಕಳದ ಅಜೆಕಾರಿನಿಂದ ಮಾರುತಿ ಝೆನ್ ಕಾರಿನಲ್ಲಿ ಪುತ್ತೂರಿಗೆ ಸಾಗಿಸುತ್ತಿದ್ದಾಗ ಪುತ್ತೂರು ನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಉಪ್ಪಿನಂಗಡಿ ಪಿಎಸ್ಐ ನಂದಕುಮಾರ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಲಿನೆಟ್ ಬೈಪಾಸ್ ಜಂಕ್ಷನ್ ಎಂಬಲ್ಲಿ ಕಾರನ್ನು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಅಧಿನಿಯಮ 1972 ರಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.