(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.09. ಭೂಕುಸಿತದಿಂದಾಗಿ ಬೆಟ್ಟ ಜರಿದು, ನೀರು ಉಕ್ಕಿ ಹರಿದ ಪರಿಣಾಮ ನೂರಾರು ರಬ್ಬರ್ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎರಡು ಮನೆಗಳಿಗೆ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನಲ್ಲಿ ಗುರುವಾರದಂದು ಸಂಭವಿಸಿದೆ.
ಗಂಡಿಬಾಗಿಲು ನಿವಾಸಿ ರೆನ್ನಿ ಎಂಬವರು ತನ್ನ ಕುಟುಂಬ ಸಮೇತರಾಗಿ ಗುರುವಾರ ಬೆಳಿಗ್ಗೆ ಮನೆಯಲ್ಲಿದ್ದ ವೇಳೆ ಭಾರೀ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಹೊರಗೋಡಿ ಬಂದು ನೋಡಿದಾಗ ಇಡೀ ಗುಡ್ಡವೇ ಕುಸಿದು ನೀರು ಹರಿಯುವುದನ್ನು ಕಂಡು ಅಪಾಯದ ಮುನ್ಸೂಚನೆ ಅರಿತು ಹೊರಗೋಡಿದ್ದರಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯ ಕೋಣೆಯೊಂದರಲ್ಲಿ ಮಲಗಿದ್ದ ವೃದ್ಧೆಯೋರ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅಲ್ಲದೆ ಇವರ ಹಾಗೂ ನೆರೆಯ ಜೋಸೆಫ್ ಎಂಬವರಿಗೆ ಸೇರಿದ ನೂರಕ್ಕೂ ಅಧಿಕ ರಬ್ಬರ್ ಗಿಡಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.