(ನ್ಯೂಸ್ ಕಡಬ) newskadaba.com ಸುಳ್ಯ, ಆ.08. ಲಾಠಿ ಹಿಡಿಯುವ ಕೈ ಹಾರೆ ಹಿಡಿದು ರಸ್ತೆಯಲ್ಲಿನ ಬೃಹತ್ ಹೊಂಡವೊಂದನ್ನು ಮುಚ್ಚಿದ ಘಟನೆ ಸುಳ್ಯದಲ್ಲಿ ಬುಧವಾರದಂದು ನಡೆದಿದೆ.
ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯದಿಂದ ಸಂಪಾಜೆಯ ಮಧ್ಯೆ ಬರುವ ಪೆರಾಜೆಯಲ್ಲಿ ಅನೇಕ ದಿನಗಳಿಂದ ಮರಣಗುಂಡಿಯೊಂದು ಬಾಯ್ದೆರೆದಿತ್ತು. ಸ್ಪಂದಿಸಬೇಕಾಗಿದ್ದವರು ಸುಮ್ಮನಿದ್ದುದರಿಂದ ಪ್ರಯಾಣಿಕರು ಕಷ್ಟ ಪಡುತ್ತಿದ್ದರು. ಸಂಚಾರದಲ್ಲಿ ಸಂಚಕಾರ ಎದುರಾಗಿರುವುದನ್ನರಿತ ಸುಳ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ವತಃ ಕೈಯಲ್ಲಿ ಹಾರೆ ಹಿಡಿದು ಕಾರ್ಯಾಚರಣೆಗೆ ಇಳಿದಿದ್ದಾರೆ. ಲಾಠಿ ಹಿಡಿಯುವ ಕೈ ಹಾರೆ ಹಿಡಿದ ಕ್ಷಣದಲ್ಲೇ ಮೃತ್ಯು ಕೂಪ ಮುಚ್ಚಿದ್ದು, ಪೊಲೀಸ್ ಅಧಿಕಾರಿಯ ಈ ಕಾರ್ಯ ಇದೀಗ ಜನಮನ್ನಣೆಗೆ ಪಾತ್ರವಾಗಿದೆ.