ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕೊಯಿಲ ಪಶು ವೈದ್ಯಕೀಯ ಕಟ್ಟಡದ ಪರಿಸರ ► ಕಟ್ಟಡ ಕಾರ್ಮಿಕರ ಬಯಲು ಶೌಚದಿಂದ ದುರ್ನಾತ ಬೀರುತ್ತಿರುವ ಕೊಯಿಲ ಗುಡ್ಡೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ, ನೋಡುಗರ ಕಣ್ಮನ ಸೆಳೆಯುವ, ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣ. ಮುಂಗಾರು ಮಳೆ ಇಳೆಗೆ ಬಿದ್ದು ತಂಪೆರೆದಾಗ ಬೆಳೆಯುವ ಹಸಿರು ಹುಲ್ಲಿನಿಂದ ಸುಂದರವಾಗಿ ಕಂಗೊಳಿಸುವ ಪುತ್ತೂರು ತಾಲೂಕಿನ ಕೊೈಲ ಗ್ರಾಮದ ಪಶುಸಂಗೋಪನಾ ಇಲಾಖೆಯ ಗುಡ್ಡಗಳು. ಈ ಸುಂದರ ತಾಣ ಇದೀಗ ಇಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ಕಟ್ಟಡದ ಕಾರ್ಮಿಕರ ಬಯಲು ಶೌಚದ ಕಾರಣದಿಂದ ದುರ್ವಾಸನೆಯಿಂದ ಕೂಡಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೊೈಲದಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಹರವಿಕೊಂಡಿರುವ ಪಶುಸಂಗೋಪನಾ ಇಲಾಖೆಯ 247 ಎಕ್ರೆ ಪ್ರದೇಶದಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯ ಸುಮಾರು 150 ಕ್ಕೂ ಮಿಕ್ಕಿದ ಕಾರ್ಮಿಕರು ಬಯಲು ಶೌಚ ನಡೆಸುತ್ತಿರುವುದರಿಂದ ಪರಿಸರದ ಗುಡ್ಡಗಳು ಇದೀಗ ದುರ್ನಾತ ಬೀರುತ್ತಿದ್ದು, ಇದೇ ಜಾಗದ ಪಕ್ಕದಲ್ಲಿರುವ ಜನವಸತಿ ಪ್ರದೇಶದವರು ವಾಸನೆಯಿಂದ ದಿನದೂಡುವಂತಾಗಿದೆ. ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಗೊಂಡು ಕರ್ನಾಟಕ ಹೌಸಿಂಗ್ ಬೋರ್ಡ್‍ನವರಿಂದ ಗುತ್ತಿಗೆ ಪಡೆದ ಬೆಂಗಳೂರಿನ ಸ್ಟಾರ್ ಬಿಲ್ಡರ್ಸ್ ಸಂಸ್ಥೆಯು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಬಿಹಾರ ಮತ್ತು ಬಯಲು ಸೀಮೆಯ ಮೂಲದ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗಾಗಿ ಮೂರು ಶೌಚಲಯವಿದ್ದರೂ, ನಿರ್ವಹಣೆಯಿಲ್ಲದೆ ಉಪಯೋಗಿಸುವಂತಿಲ್ಲವಾಗಿದೆ.

ಶೌಚಾಲಯದ ಕೊರತೆಯಿಂದಾಗಿ ಮಹಿಳಾ ಕಾರ್ಮಿಕರು ಬಹಳಷ್ಟು ಬವಣೆ ಎದುರಿಸುವಂತಾಗಿದೆ. ಬಟ್ಟೆ, ಸ್ನಾನದ ಕೊಳಚೆ ನೀರು ಗುಡ್ಡದಲ್ಲಿ ಹರಿದು ಕೆಳಗಿನ ಭಾಗವಾದ ಎಲ್ಯಂಗ, ಆತೂರು ಬೈಲು ಮೊದಲಾದ ಸುಮಾರು 29 ಕ್ಕೂ ಹೆಚ್ಚು ಕುಟುಂಬಗಳಿರುವ ವಸತಿ ಪ್ರದೇಶದತ್ತ ಹರಿಯುತ್ತಿದೆ. ಮಳೆ ನೀರಿನೊಂದಿಗೆ ಗುಡ್ಡದಲ್ಲಿನ ಮಲ , ಶೌಚ ನೀರು, ಬಟ್ಟೆ ಅಡುಗೆ ಪಾತ್ರೆ ತೊಳೆದ ಕೊಳಚೆ ನೀರು ಕೆಳಗಿನ ಪ್ರದೇಶದತ್ತ ಹರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕಾರ್ಮಿಕರೆಲ್ಲರೂ ಅಲ್ಲಲ್ಲಿ ಸುಮಾರು 7 ಶೆಡ್‍ಗಳಲ್ಲಿ ವಾಸಿಸುತ್ತಿದ್ದು, ಶೆಡ್‍ಗೆ ವಿದ್ಯುತ್ ಸೌಲಭ್ಯ ನೀಡಲಾಗಿದ್ದರೂ, ಶೆಡ್ ನ್ನು ತಗಡು ಶೀಟಿನಿಂದ ನಿರ್ಮಾಣ ಮಾಡಿದ್ದರಿಂದಾಗಿ ಸುರಕ್ಷತೆಯಿಲ್ಲ. ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಗುತ್ತಿಗೆದಾರಲ್ಲಿ ಹೇಳಿಕೊಂಡಿದ್ದೇವಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕಾರ್ಮಿಕರು.

ಸ್ಥಳಿಯರ ದೂರಿನ ಮೇರೆಗೆ ಕೊೈಲ ಗ್ರಾಮ ಪಂಚಾಯಿತಿ ನೋಟೀಸು ನೀಡಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿತ್ತಲ್ಲದೆ ಸ್ವತಃ ಪಂಚಾಯಿತಿ ಅದಿಕಾರಿಗಳು, ಆಡಳಿತ ಮಂಡಳಿ, ಸ್ಥಳೀಯ ಅರೋಗ್ಯ ಸಹಾಯಕಿಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಕಾರ್ಮಿಕರಿಗೆ, ಗುತ್ತಿಗೆದಾರರಿಗೆ ಸೂಚಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹುಡುಗರ, ಹುಡುಗಿಯರ ವಸತಿ ನಿಲಯ, ಅತಿಥಿ ಗೃಹ, ಕಾಲೇಜು ಕಟ್ಟಡ, ಆಸ್ಪತ್ರೆ ಕಟ್ಟಡಗಳು ನಿರ್ಮಾಣ ಹಂತದಲ್ಲಿದೆ. ಕಚೇರಿ ಮತ್ತು ಸಿಬ್ಬಂದಿ ವಸತಿ ಗೃಹದ ನಿರ್ಮಾಣ ಇನ್ನಷ್ಟೇ ಆರಂಭವಾಗಬೇಕಾಗಿದೆ. ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊೈಲ, ವಳಕಡಮ ಶಾಲೆಗಳನ್ನು , ಮಸೀದಿ, ಪ್ರಮುಖ ಪೇಟೆಗಳನ್ನು ಸಂಪರ್ಕಿಸಲು ನೂರಾರು ಮಂದಿ ಉಪಯೋಗಿಸುವ ರಸ್ತೆಗಳು ಇದೇ ಕಟ್ಟಡಗಳ ಪಕ್ಕದ ಜಾಗದಲ್ಲಿ ಹಾದು ಹೋಗಿದೆ.

ಕಟ್ಟಡಗಳು ಗುಡ್ಡಗಳ ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತಿದ್ದು, ಇಲ್ಲಿ ಮರಳುಗಳನ್ನು ಸುರಕ್ಷಿತವಾಗಿ ಸಂಗ್ರಹಿಸದ ಕಾರಣ ಮಳೆ ನೀರಿನೊಂದಿಗೆ ತಳ ಭಾಗದ ರಸ್ತೆ ಚರಂಡಿಗಳಿಗೆ ಮರಳು ಹಾಗೂ ಕಸ ಕಡ್ಡಿಗಳು ಸೇರುತ್ತಿದೆ. ಹಾಗಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿದಾಡಿ ಪಕ್ಕದ ಕೃಷಿ ತೋಟಗಳಿಗೆ ನುಗ್ಗಿ ಅಲ್ಲಿ ಮರಳು ಕಸಕಡ್ಡಿಗಳು ಸಂಗ್ರಹವಾಗಿ ಕೃಷಿ ನಾಶವಾಗುವ ಹಂತಕ್ಕೆ ತಲುಪಿದೆ.

ಕಾಮಗಾರಿ ಆರಂಭದಿಂದಲೂ ಇಲ್ಲಿನ ಕಾರ್ಮಿಕರು ಬಯಲು ಶೌಚವನ್ನು ಆಶ್ರಯಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಸ್ಥಳಿಯರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸ್ವಚ್ಚ ಭಾರತ ಪರಿಕಲ್ಪನೆಗೆ ಗುತ್ತಿಗೆದಾರರ ದುರ್ನಡತೆಯಿಂದ ಕಳಂಕ ತಂದಿದೆ. ಅಲ್ಲದೆ ಕೊೈಲ ಗ್ರಾಮ ಸ್ಚಚ್ಚ ಗ್ರಾಮವೆಂಬ ಪ್ರಶಸ್ತಿ ಪಡೆದಿದ್ದು, ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಈಗಾಗಲೆ ನೋಟಿಸು ನೀಡಲಾಗಿದ್ದರೂ ಯಾವುದೇ ಸ್ಪಂದನೆ ನೀಡಿಲ್ಲ. ಸಂಬಂಧಪಟ್ಟವರು ತಕ್ಷಣ ಕ್ರಮಕೈಗೊಳ್ಳದಿದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು.

ಸುಲೈಮಾನ್, ಸದಸ್ಯರು, ಕೊೈಲ ಗ್ರಾಮ ಪಂಚಾಯಿತಿ

 

ಕಾರ್ಮಿಕರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಕೊಡುವುದು ಗುತ್ತಿಗೆದಾರರ ಜವಾಬ್ದಾರಿ . ಕಾಲೇಜು ನಿರ್ಮಾಣದ ಹೊಣೆ ಹೊತ್ತ ಕರ್ನಾಟಕ ಹೌಸಿಂಗ್ ಬೋರ್ಡ್‍ನ ಮಂಗಳೂರಿನ ಅದಿಕಾರಿಗಳೊಂದಿಗೆ ಮತ್ತು ಗುತ್ತಿಗೆ ಪಡೆದಿರುವ ಬೆಂಗಳೂರಿನ ಸ್ಟಾರ್ ಬಿಲ್ಡ್ರಸ್ ನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳಲಾಗುವುದು.
ಡಾ. ನಾರಾಯಣ ಭಟ್, ವಿಶೇಷ ಕರ್ತವ್ಯ ಅಧಿಕಾರಿ ಪಶುವೈದಕೀಯ ಕಾಲೇಜು ಕೊೈಲ

error: Content is protected !!

Join the Group

Join WhatsApp Group