ಆಲಂಕಾರು: ಕಳ್ಳರೇ ಎಚ್ಚರಿಕೆ..!! ಕಸಿ ಗೇರು ಸಸಿ ಕದ್ದರೆ ಕಾನತ್ತೂರಿಗೆ ಹರಕೆ…!! ► ದೈವದ ಮೊರೆ ಹೋದ ಗೇರು ಅಭಿವೃದ್ಧಿ ನಿಗಮ

(ನ್ಯೂಸ್ ಕಡಬ) newskadaba.com ಕಡಬ, ಜು.29. ಆಲಂಕಾರು ಗ್ರಾಮದಲ್ಲಿ ಹೊಸದಾಗಿ ಇತ್ತೀಚೆಗೆ ನೆಟ್ಟಿರುವ ಗೇರು ಸಸಿಗಳನ್ನು ಕಳ್ಳರು ರಾತ್ರಿ ವೇಳೆ ಕಳವು ಮಾಡುತ್ತಿರುವುದರಿಂದ ಕಳ್ಳರ ಕಾಟವನ್ನು ನಿಯಂತ್ರಿಸಲು ಕರ್ನಾಟಕ ಗೇರು ಅಭಿವೃದ್ದಿ ನಿಗಮವು ದೈವದ ಮೊರೆ ಹೋಗುವುದಾಗಿ ಕಳ್ಳರಿಗೆ ಎಚ್ಚರಿಕೆಯನ್ನು ಸೂಚಿಸುವ ಎಚ್ಚರಿಕೆಯ ಗಂಟೆಯನ್ನು ಅಲ್ಲಲ್ಲಿ ಅಳವಡಿಸಿದೆ.

ಗೇರು ಅಭಿವೃದ್ಧಿ ನಿಗಮವು ಆಲಂಕಾರು ಗ್ರಾಮದಲ್ಲಿ ತನ್ನ ಅಧೀನದ 210 ಎಕ್ರೆ ಜಾಗದಲ್ಲಿ 2000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿತ್ತು. ಮಳೆಗಾಲದ ಆರಂಭದಲ್ಲೇ ಗುಂಡಿಯನ್ನು ನಿರ್ಮಿಸಿ ಗಿಡ ನೆಡುವ ಕಾರ್ಯವನ್ನು ಒಂದು ವಾರದ ಹಿಂದೆ ಮಾಡಿ ಮುಗಿಸಿತ್ತು. ಉತ್ತಮ ಗೇರು ತಳಿಯನ್ನು ಈ ಬಾರಿ ನೆಟ್ಟಿರುವುದೇ ಕಳ್ಳರನ್ನು ಇತ್ತ ಆಕರ್ಷಿಸುವಂತೆ ಮಾಡಿದೆ. ಗಿಡ ನೆಟ್ಟ ಮರುದಿನದಿಂದಲೇ ಗೇರು ಗಿಡಗಳನ್ನು ಕಳ್ಳತನ ಮಾಡುವ ಕಾರ್ಯ ಆರಂಭಗೊಂಡಿದೆ. ಆಲಂಕಾರು ಗ್ರಾಮದ ಕಜೆಯಂಗಡಿ ಬಳಿಯಿಂದ ಕಯ್ಯಪ್ಪೆಯಲ್ಲಿಯವರೆಗೆ ಸುಮಾರು 100ಕ್ಕೂ ಅಧಿಕ ಗಿಡಗಳನ್ನು ಕಳವು ಮಾಡಲಾಗಿದೆ. ಜೊತೆಗೆ 100ಕ್ಕೂ ಅಧಿಕ ನೆಟ್ಟ ಗಿಡಗಳನ್ನು ಕಿತ್ತು ನಾಶಪಡಿಸಲಾಗಿತ್ತು. ಇದು ಯಾರೋ ಕಿಡಿಗೇಡಿಗಳ ಕಾರ್ಯವಾಗಿದ್ದು ಹಲವು ದಿನಗಳಿಂದ ಸಿಬ್ಬಂದಿಗಳು ಕಿಡಿಗೇಡಿಗಳ ಪತ್ತೆಗಾಗಿ ಕಾವಲು ಕಾಯುತ್ತಿದ್ದಾರೆ. ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ. ಗಿಡ ಕಳವು ದಂಧೆ ರಾತ್ರಿ ವೇಳೆಯಲ್ಲೇ ಹೆಚ್ಚಾಗಿರುವುದರಿಂದ ಸಮಸ್ಯೆಯನ್ನು ಪರಿಹರಿಸುವುದು ಗೇರು ಅಭಿವೃದ್ದಿ ನಿಗಮಕ್ಕೆ ನುಂಗಲಾರದ ತುತ್ತಾಗಿದೆ. ಇದಕ್ಕಾಗಿ ಕಸಿ ಗೇರು ಗಿಡ ಕದ್ದವರಿಗೆ ಕಾನತ್ತೂರಿಗೆ ಹರಕೆ ಇಡಲಾಗುವುದು ಎಂಬ ಎಚ್ಚರಿಕೆಯ ಬೋರ್ಡ್‌ ಗಳನ್ನು ಅಲ್ಲಲ್ಲಿ ಹಾಕಲಾಗಿದ್ದು ಎಷ್ಟು ಕಳ್ಳರು ಇದಕ್ಕೆ ಹೆದರುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ.

Also Read  ವಲಸೆ ಕುರಿಗಾರರಿಂದ ಅರ್ಜಿ ಆಹ್ವಾನ


ಕಳೆದ ವರ್ಷವು ಇದೇ ಪ್ಲಾಂಟೇಶನ್‍ ನಲ್ಲಿ ಗೇರು ಸಸಿ ನೆಡಲಾಗಿತ್ತು. ಆದರೆ ಅಂದು ಮುಳ್ಳುಹಂದಿ, ಹೆಗ್ಗಣಗಳ ಉಪಟಳ ಹೆಚ್ಚಾಗಿ ಹಲವು ಗಿಡಗಳನ್ನು ನಾಶ ಪಡಿಸಿತ್ತು. ಇದಕ್ಕಾಗಿ ಕಾರಣಕ್ಕಾಗಿ ಈ ಬಾರಿ ಪ್ರತೀ ಗಿಡಗಳಿಗೆ ಒಂದೂವರೆ ಇಂಚು ಅಳತೆಯ ಪಿವಿಸಿ ಪೈಪ್ ತುಂಡನ್ನು ಗಿಡಗಳಿಗೆ ರಕ್ಷಣಾ ಕವಚವಾಗಿ ಹಾಕಿರುವ ಕಾರಣ ಹಂದಿ ಹಾಗು ಹೆಗ್ಗಣಗಳ ಉಪಟಳದಿಂದ ರಕ್ಷಿಸಲಾಗಿದೆ. ಆದರೆ ಇದೀಗ ಕಳ್ಳರ ಕಾಟ ಹೆಚ್ಚಾಗಿರುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಇಲಾಖೆಯು ಒಂದು ಗಿಡಕ್ಕೆ 35ರೂಪಾಯಿ ವೆಚ್ಚ ಭರಿಸಿ ಗಿಡ ಖರೀದಿ ಮಾಡುತ್ತಿದೆ. ದುಬಾರಿ ಬೆಲೆಯ ಗಿಡ ಕಳ್ಳರ ಪಾಲಾಗುತ್ತಿರುವುದು ಬೇಸರದ ವಿಚಾರವಾಗಿದೆ. ಕಳ್ಳರು ಯಾರೆಂದು ತಿಳಿದು ಬಾರದ ಕಾರಣ ಪೊಲೀಸ್ ದೂರು ನೀಡಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೈವದ ಮೊರೆ ಹೊಕ್ಕಿದ್ದೇವೆ. 2004ರಿಂದ ಪ್ರತೀ ವರ್ಷ ಕಾನತ್ತೂರು ಕ್ಷೇತ್ರ ಹೋಗಿ ಸೇವೆಯನ್ನು ಸಲ್ಲಿಸಿ ಗಿಡ ಕಳ್ಳರಿಗೆ ಇನ್ನಾದರೂ ಒಳ್ಳೆಯ ಬುದ್ದಿಯನ್ನು ಕರುಣಿಸು ದೈವವೇ ಎಂದು ಪ್ರಾರ್ಥಿಸಿ ಬರುತ್ತಿದ್ದೇನೆ. ಇಲಾಖೆಯ ಹಿತದೃಷ್ಠಿಯಿಂದ ಈ ವಿನೂತನ ಪ್ರಯೋಗ ಮಾಡಲಾಗಿದೆ.

Also Read  ಕಡಬ: ಕಳಾರ ಸಮೀಪ ಬೆಂಕಿ ಆಕಸ್ಮಿಕ ➤ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

– ಸುರೇಶ್ ಗೌಡ, ಪುತ್ತೂರು ಕೆ.ಸಿ.ಡಿ.ಸಿ ವಲಯ ಅರಣ್ಯಾಧಿಕಾರಿ ಹಾಗೂ ನೆಡುತೋಪು ಅಧೀಕ್ಷಕ

error: Content is protected !!
Scroll to Top