ಕಡಬ ಸಂಪೂರ್ಣ ಬಂದ್ ► ಪೇಟೆಯಲ್ಲಿ ಪೊಲೀಸರ ಸರ್ಪಗಾವಲು

ಕಡಬ, ಜು.17. ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಭಾನುವಾರ ಸಂಜೆ ಕಡಬದ ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ಹಲ್ಲೆ ನಡೆಸಿದ ಕಾರಣದಿಂದ ಸೋಮವಾರದಂದು ಕಡಬ ಬಂದ್ ಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಕಡಬ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಪೇಟೆಯಲ್ಲಿ ಒಂದೆರಡು ಅಂಗಡಿಗಳು ತೆರೆದಿದ್ದು ಬಿಟ್ಟರೆ ಇನ್ನುಳಿದಂತೆ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು.

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸಭೆ ಸೇರಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮುಖಂಡರ ಮನವಿಯ ಮೇರೆಗೆ ಚದುರಿದರು‌. ಭದ್ರತೆಯ ದೃಷ್ಟಿಯಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಬಿಜೆಪಿಯ ಪ್ರಮುಖರು ಮಾತನಾಡಿ ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದರು. ಮತ್ತು ಶಾಂತಿ ಕಾಪಾಡುವಂತೆ ಸಂಘಟನೆಯ ಎಲ್ಲಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಸತೀಶ್ ನಾಯ್ಕ್, ಪ್ರಕಾಶ್ ಎನ್.ಕೆ., ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನಿಲ್ ಕುಲಕರ್ಣಿ, ಹೆಚ್ಚುವರಿ ಪಡೆಯ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ, ಇಂಟೆಲಿಜೆನ್ಸ್ ಇನ್ಸ್‌ಪೆಕ್ಟರ್ ನಂದಕುಮಾರ್, ಸಂಪ್ಯ ಸಬ್ ಇನ್ಸ್‌ಪೆಕ್ಟರ್ ಖಾದರ್, ಕಡಬ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು‌.

error: Content is protected !!

Join the Group

Join WhatsApp Group