ಆಲಂಕಾರು:ಕೃಷಿ ರೂಪಿಸಿದ ಬದುಕಿನ ಭವಿಷ್ಯ

 (ನ್ಯೂಸ್ ಕಡಬ) newskadaba.com ,ಆಲಂಕಾರು.ಜೂ.12. ಯುವ ಜನತೆ ದೇಶದ ಸಂಪತ್ತು ಎಂಬ ಮಾತಿಗೆ ವೆತಿರಿಕ್ತವಾಗಿಯೇ ನಡೆದುಕೊಳ್ಳುವ ಇಂದಿನ ಯುವ ಜನತೆ, ಸಮಾಜ ವಿರೋಧಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡು ತನ್ನ ಬದುಕಿನ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಮನಸ್ಸಿದ್ದರೆ ಮಾರ್ಗ. ಸಾಧಿಸಿದರೆ ಸಬಳವನ್ನು ನುಂಗಬಹುದು ಎಂಬುವುದನ್ನು ಕಡಬ ತಾಲೂಕು ಕುಂತೂರು ಗ್ರಾಮದ ಕೋಡ್ಲ ನಿವಾಸ ಉಮೇಶ್ ಪೂಜಾರಿ ಎಂಬ ಪ್ರಗತಿಪರ ಕೃಷಿಕ ಸಾಧಿಸಿ ತೋರಿಸಿದ್ದಾರೆ.
ಬಡ ಕೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಉಮೇಶ್ ಅಕ್ಷರದ ಗುರುತು ಸಿಗುವಷ್ಟು ವಿದ್ಯಾಬ್ಯಾಸವನ್ನು ಪೊಷಕರು ಕಷ್ಟಪಟ್ಟು ನೀಡಿದರು. ಬಡತನದ ಕಾರಣಕ್ಕೆ ಇವರಿಗೆ ಸಮರ್ಪಕ ವಿದ್ಯಾಬ್ಯಾಸಕ್ಕೆ ತೊಂದರೆಯಾಯಿತು. ಆದರೆ ಛಲದಂಕನಾದ ಉಮೇಶ್ ವಿದ್ಯಾಬ್ಯಾಸ ಕಡಿಮೆಯಿದ್ದರೇನಂತೆ ಕೃಷಿ ಕಾಯಕದಲ್ಲಿ ಸಾಧನೆಯನ್ನು ಮಾಡಬೇಕೆಂಬ ಹಂಬಲದಿಂದ ತನ್ನ ತಂದೆಯ ಆಸ್ತಿಯಲ್ಲಿ ಮೈಮುರಿದು ದುಡಿದುದರ ಪರಿಣಾಮ ಇಂದು ಒಬ್ಬ ಮಾದರಿ ಪ್ರಗತಿಪರ ಕೃಷಿಕನಾಗಿ ಮೂಡಿ ಬಂದಿದ್ದಾರೆ. ಇಂದು ತನ್ನ 3ಎಕ್ರೆ ಜಾಗದಲ್ಲಿ ಎಲ್ಲಿಯು ಖಾಲಿ ಜಾಗ ಇಲ್ಲದ ರೀತಿಯಲ್ಲಿ ಕೃಷಿಯನ್ನು ಮಾಡಿದ್ದಾರೆ.
ಆರಂಭದಲ್ಲಿ ತನ್ನ ಜಮೀನಿನಲ್ಲಿ 60 ಪಾಂಬಾಯಿಲ್ ಗಿಡವನ್ನು ನೆಟ್ಟು ಬೆಳೆಸಿದರು. ಇದೀಗ ನಾಲ್ಕು ವರ್ಷ ಸಂದಿದ್ದು ಮೊದಲ ಒಂದೇ ವರ್ಷದಲ್ಲಿ 2ಟನ್ ಪಾಂಬಾಯಿಲ್ ಕಾಯಿಯನ್ನು ಪಡೆದಿರುತ್ತಾರೆ. ಪ್ರತಿ 15ದಿಕ್ಕೊಮ್ಮೆ ಪಾಂಬಾಯಿಲ್ ಗೊನೆ ಕಟಾವಿಗೆ ಬರುತ್ತಿದ್ದು ಇದರಿಂದ ಕೈತುಂಬ ಸಂಪಾದನೆಯೊಂದಿಗೆ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾರೆ. ಜೊತೆಗೆ ಲೋಕಲ್, ಮಂಗಳ, ಸುಮಂಗಳ ಎಂಬ ಪ್ರಭೇದ 800 ಅಡಿಕೆ ಗಿಡಗಳನ್ನು ಬೆಳೆಸಿದ್ದು, ಮಿಶ್ರ ಬೆಳೆಯಾಗಿ ಪಣಿಯೂರು, ಅರಕಳ ಮುಂಡ, ಹಾಗೂ ಕರಿಮುಂಡ ಎಂಬ ಮೂರು ಪ್ರಭೇದದ ಕರಿಮೆಣಸು ಗಿಡಗಳನ್ನು ಎಲ್ಲಾ ಅಡಿಕೆ ಮರಗಳಿಗೆ ನೆಟ್ಟು ಬೆಳೆಸಿದ್ದಾರೆ. ಅಲ್ಲದೆ ತೋಟದ ಸುತ್ತ 60 ತೆಂಗಿನ ಗಿಡಗಳನ್ನು ಬೆಳೆಸಿದ್ದು ವರ್ಷಕ್ಕೆ 10 ಕ್ವಿಂಟಾಲ್ ತೆಂಗು ಬೆಳೆಯುತ್ತಿದ್ದಾರೆ. ಇನ್ನುಳಿದಂತೆ 100 ರಬ್ಬರ್ ಮರಗಳನ್ನು ಬೆಳೆಸಿದ್ದು ದಿನಕ್ಕೆ ಸರಾಸರಿಯಾಗಿ 10 ಶೀಟ್ಗಳ ರಬ್ಬರ್ ದೊರೆಯುತ್ತಿದ್ದು, ನಾಲ್ಕು ವರ್ಷ ಪ್ರಾಯದ 100 ರಾಂ ಪತ್ರೆ ಗಿಡಗಳನ್ನು ಬೆಳೆಸಿದ್ದಾರೆ.

Also Read  ನಿನ್ನಿಕಲ್ಲು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಆತ್ಯಹತ್ಯೆಗೆ ಶರಣು

ಜೊತೆಗೆ ಮಲ್ಲಿಗೆ ಕೃಷಿಗೂ ಮಹತ್ವ ನೀಡಿದ್ದಲ್ಲದೆ ಸುಮಾರು 25 ಪ್ರಭೇದದ ವಿವಿಧ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಥೈಲಾಂಡ್ ಹಲಸು, ಗಮ್ಲೆಸ್ ಹಲಸು, ಚಂದ್ರ ಹಲಸು ಪ್ರಮುಖವಾದುದು. ಉಳಿದಂತೆ ಬರಬಾ, ಜಬೊಟಿಕಬೋ, ಮ್ಯಾಂಗೋಸ್ಟಿನ್, ಮಿರಾಕಂಬಲ್ ಪ್ರುಡ್, ಸರ್ವಸಾಂಬಾರ್,ವುಲೋಸಮ್, ಎಲಿಫೆಂಟ್ ಆ್ಯಪಲ್, ಸೂರಿನಂ ಚೆರಿ, ಸ್ಟ್ರಾಬೆರಿ ಪೆರೆಳೆ, ಬೇಕರಿ ಚೆರಿ, ರಾಜಾನೆಲ್ಲಿ ಅಲ್ಲದೆ ಕ್ಯಾನ್ಸರ್ಗೆ ರಾಮಬಾಣವಾದ ಹನುಮ ಫಲ, ಮಂತ್ ಹುಳಿ, ಗಂಧದ ಗಿಡಗಳನ್ನು ಬೆಳೆಸಿಕೊಂಡಿದ್ದಾರೆ. ಮಾತ್ರವಲ್ಲದೆ ಹೈನುಗಾರಿಕೆ, ನಾಟಿ ಕೋಳಿ ಸಾಕಾಣೆಗೂ ಹೆಚ್ಚು ಮಹತ್ವವನ್ನು ನೀಡಿದ್ದಾರೆ.
ದಿನದ ಹೆಚ್ಚಿನ ಗಂಟೆಗಳು ಉಮೇಶ್ರವರ ಪಾಲಿಗೆ ದುಡಿಮೆಯ ಗಂಟೆಗಳಾಗಿವೆ. ಬೆಳಿಗ್ಗೆ 5 ಗಂಟೆಗೆ ಇವರ ದೈನಂದಿನ ದಿನಚರಿ ಆರಂಭವಾದರೆ ರಾತ್ರಿ 7ರ ತನಕ ಇವರ ಕಾಯಕ ನಡೆಯುತ್ತದೆ. ವಿಶೇಷವೆಂದರೆ ಯಾವುದೇ ಕೆಲಸಕ್ಕೆ ಇವರ ಮನೆಯವರಲ್ಲದೆ ಬೇರೆ ಕೂಲಿಯಾಳುಗಳ ನೆರವು ಪಡೆಯವುದಿಲ್ಲ. ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ನಿಂದ ಹಿಡಿದು ಅಡಿಕೆಗೆ ಮುದ್ದು ಸಿಂಪಡಣೆ, ಅಡಿಕೆ ಕೊಯಿಲು, ಅಡಿಕೆ ಸುಳಿಯುವುದು ಎಲ್ಲಾ ಕಾರ್ಯಗಳನ್ನು ಇವರೋಬ್ಬರೆ ನಿರ್ವಹಿಸುತ್ತಾರೆ. ಇವರಿಗೆ ಪತ್ನಿ, ತಂದೆ, ತಾಯಿ ಮತ್ತು ಮೂವರು ಮಕ್ಕಳು ಸಹಾಯಕರಾಗಿ ಕೈಜೋಡಿಸುತ್ತಾರೆ.
ಕೃಷಿ ಬದುಕು ತೃಪ್ತಿ ತಂದಿದೆ- ಉಮೇಶ್
ಉತ್ತಮ ವಿದ್ಯಾಬ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆಯಬೇಕೆಂಬ ಆಸೆಯಿತ್ತು. ಆದರೆ ಆರ್ಥಕ ಅಡಚಣೆ ನನ್ನ ಆಸೆಗೆ ತಣ್ಣೀರೆಚಿದೆ. ಆದರೂ ಜೀವನದಲ್ಲಿ ಸಾಧಿಸಬೇಕೆಂಬ ಹಠ ಇಂದು ನನ್ನನ್ನು ಕೃಷಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನನ್ನ ಮಕ್ಕಳನ್ನು ಇದೀಗ ಉತ್ತಮವಾಗಿ ಓದಿಸುತ್ತಿದ್ದೇನೆ. ಸರಕಾರಿ ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ. ಕೃಷಿಯಲ್ಲಿ ಅವರನ್ನು ಈಗೀಂದೀಗಲೇ ತೊಡಗಿಸಿಕೊಂಡು ಮಾಹಿತಿ ನೀಡುತ್ತಿದ್ದೇನೆ. ನನ್ನನ್ನು ಸೇರಿದಂತೆ ಇಡೀ ನನ್ನ ಕುಟುಂಬಕ್ಕೆ ಕೃಷಿ ಬದುಕು ತೃಪ್ತಿ ತಂದಿದೆ ಎಂದು ಉಮೇಶ್ ಪ್ರತಿಕ್ರಿಯಿಸಿದರು.

Also Read  ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

 

error: Content is protected !!
Scroll to Top