(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.12. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಮಣ್ಣು ಕುಸಿದು ಬೀಳುತ್ತಿರುವುದರಿಂದ ಎರಡು ದಿನಗಳ ಕಾಲ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ ಘಾಟ್ ನ 11 ನೇ ಕ್ರಾಸ್ ನಲ್ಲಿ ಉಂಟಾದ ಭೂಕುಸಿತದಿಂದಾಗಿ ರಸ್ತೆಯು ಸಂಪೂರ್ಣ ಬಂದಾಗಿರುವುದರಿಂದ ಮಣ್ಣನ್ನು ತೆರವುಗೊಳಿಸಲು ಕಾಲಾವಕಾಶ ಬೇಕಾಗಿರುವುದರಿಂದ ಗುರುವಾರದವರೆಗೆ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರದಲ್ಲಿ ವಾಹನಗಳನ್ನು ತಡೆಹಿಡಿಯುವ ಮೂಲಕ ಚಾರ್ಮಾಡಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಈ ನಡುವೆ ರಸ್ತೆ ಮಧ್ಯೆ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ನೀರು ಬಿಸ್ಕೆಟ್ ಹಾಗೂ ಬಾಳೆಹಣ್ಣು ನೀಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದು, ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ರಸ್ತೆ ತಡೆಯಿಂದಾಗಿ ನೂರಾರು ವಾಹನಗಳು ಮುಂದೆ ಹೋಗಲು ಸಾಧ್ಯವಾಗದೆ ಹಿಂತಿರುಗಿ ಬರಲೂ ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿದ ದಕ್ಷಿಣ ಕನ್ನಡ ಪೊಲೀಸರು ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅನುಮಾಡಿ ಕೊಟ್ಟರು. ಆದರೆ ಹೆಚ್ಚಿನ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ಇದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.