
(ನ್ಯೂಸ್ ಕಡಬ) newskadaba.com, ಅ 26 . ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಹುಟ್ಟಿನಿಂದಲೇ ವಿಶೇಷ ಚೇತನಳಾಗಿದ್ದ 14 ವರ್ಷದ ಮಗಳನ್ನು ಕತ್ತಿಯಿಂದ ಕಡಿದು ಕೊಲೆಗೈದು, ತಾಯಿ ತಾವೂ ನೇಣಿಗೆ ಶರಣಾಗಿರುವ ದಾರುಣ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.
ಶಾನಾಡಿ ಕೊರಗ ಕಾಲನಿ ನಿವಾಸಿ ಸುಧಾಕರ ಕೊರಗ ಅವರ ಪತ್ನಿ ನೇತ್ರಾವತಿ (34) ಹಾಗೂ ಅವರ ಪುತ್ರಿ ಸುಪ್ರತಿ (14) ಮೃತ ದುರ್ದೈವಿಗಳು.ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಇವರ ಪುತ್ರಿ ಸುಪ್ರತಿ ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದು, ನಡೆಯಲು, ಕುಳಿತುಕೊಳ್ಳಲು ಹಾಗೂ ಮಾತನಾಡಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದಳು. ಮಗಳ ನಿರಂತರ ಆರೈಕೆಯನ್ನು ತಾಯಿ ನೇತ್ರಾವತಿ ನೋಡಿಕೊಳ್ಳುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವೂ ಇದೆ.
ರವಿವಾರ ಬೆಳಗ್ಗೆ ಸುಧಾಕರ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ ಬಳಿಕ, ನೇತ್ರಾವತಿ ಅವರು ಮನೆಯ ಕೆಲಸಗಳನ್ನು ಮುಗಿಸಿ ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ತಾವೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ವಿಷಯ ತಿಳಿದ ಕೂಡಲೇ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಬ್ರಹ್ಮಾವರ ವೃತ್ತನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಶೋಧನಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




