
(ನ್ಯೂಸ್ ಕಡಬ) newskadaba.com, ಅ.19. : 137 ಬಗೆಯ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಪರಿಷ್ಕೃತ ಬೆಲೆ ನ.9 ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಒಳಪಡದ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ವ್ಯಾಪಾರ ಲಾಭಾಂಶದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸಿತ್ತು. ಹೀಗಾಗಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ 70% ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಇಮ್ಯುನೋಥೆರಪಿ ಸೇರಿದಂತೆ ಪೆಂಬ್ರೊಲಿಜುಮಾಬ್, ದುರ್ವಾಲುಮಾಬ್ ಮತ್ತು ಓಸಿಮರ್ಟಿನಿಬ್ ಔಷಧಿಗಳು ಅಗ್ಗವಾಗುವ ನಿರೀಕ್ಷೆಯಿದೆ. ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಬೆಲೆ ಇಳಿಕೆಯಾಗಲಿದೆ. ಔಷಧ ತಯಾರಕರು ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರಕಟಿಸಬೇಕಿದೆ. ಅಲ್ಲದೇ ಪರಿಷ್ಕೃತ ಬೆಲೆಗಳನ್ನು ಔಷಧ ಅಂಗಡಿಗಳಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಔಷಧದ ಅಂಗಡಿಗಳು ಮತ್ತು ಆಸ್ಪತ್ರೆಗಳು ನವೆಂಬರ್ 9ರಿಂದ ಕಡಿತಗೊಂಡ ಬೆಲೆಯಲ್ಲೇ ಔಷಧ ಮಾರಾಟ ಮಾಡಬೇಕಿದೆ.
ಸರ್ಕಾರದ ಈ ನಿರ್ಧಾರದಿಂದ ದುಬಾರಿ ಕ್ಯಾನ್ಸರ್ ಚಿಕಿತ್ಸೆಯಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಪರಿಹಾರ ಸಿಗಲಿದೆ. ಸರ್ಕಾರದ ಈ ನಿರ್ಧಾರ ಜಾರಿಗೆ ಬಂದರೆ, ದೇಶದ ಲಕ್ಷಾಂತರ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಒಟ್ಟಾರೆಯಾಗಿ ವಾರ್ಷಿಕ ಸುಮಾರು 2,500 ಕೋಟಿ ರೂ.ಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.




