ಕರ್ನಾಟಕ ಸರ್ಕಾರಿ ವೈದ್ಯರಿಗೆ ಹೊಸ ರೂಲ್ಸ್: ನವೆಂಬರ್ 1ರಿಂದ ‘ಕರ್ತವ್ಯ’ ಆಪ್ ಮೂಲಕ ರಾತ್ರಿ ಹಾಜರಾತಿ ಕಡ್ಡಾಯ!

(ನ್ಯೂಸ್‌ ಕಡಬ) newskadaba.com, ಅ.19. ರಾಜ್ಯದ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಸುಧಾರಿಸುವ ಮತ್ತು ವೈದ್ಯರ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ಇನ್ನು ಮುಂದೆ ಪ್ರತಿದಿನ ರಾತ್ರಿ 9 ಗಂಟೆಯ ಬಳಿಕ ‘ಕರ್ತವ್ಯ’ಆಪ್ ಮೂಲಕ ರಾತ್ರಿ ಹಾಜರಾತಿಯನ್ನು ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಹೊಸ ನಿಯಮವು ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಕ್ಟೋಬರ್ 17ರಂದೇ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ, ಕರ್ತವ್ಯ ಆಪ್‌ನಲ್ಲಿ ಪ್ರತ್ಯೇಕ ರಾತ್ರಿ ಹಾಜರಾತಿ ಮಾಡ್ಯೂಲ್ ಅನ್ನು ಸಿದ್ಧಪಡಿಸಲಾಗಿದ್ದು, ‘ಜಿಯೋ-ಫೆನ್ಸಿಂಗ್’ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ವೈದ್ಯರು ತಾವು ಕರ್ತವ್ಯ ನಿರ್ವಹಿಸುವ ನಿಗದಿತ ಪ್ರದೇಶಗಳಿಂದಲೇ ಹಾಜರಾತಿ ಹಾಕುತ್ತಿದ್ದಾರೆ ಎಂಬುದನ್ನು ವ್ಯವಸ್ಥೆಯು ಖಚಿತಪಡಿಸಿಕೊಳ್ಳಲಿದೆ. ತಾಲೂಕು ಅಥವಾ ಗ್ರಾಮ ಮಟ್ಟದಲ್ಲಿ ನಿಯೋಜನೆಗೊಂಡಿರುವ ವೈದ್ಯರು ಪೂರ್ವಾನುಮತಿಯಿಲ್ಲದೆ ತಮ್ಮ ಕೇಂದ್ರಸ್ಥಾನದಿಂದ ಹೊರಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅನುಮತಿಯಿಲ್ಲದೆ ತಮ್ಮ ಕೇಂದ್ರಸ್ಥಾನದಲ್ಲಿ ಲಭ್ಯವಿಲ್ಲದ ವೈದ್ಯರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ವೈದ್ಯರು ಅಧಿಕೃತ ರಜೆಯಲ್ಲಿದ್ದರೆ, ಅಧಿಕೃತ ಕರ್ತವ್ಯದ ನಿಮಿತ್ತ ಹೊರಹೋಗಿದ್ದರೆ ಅಥವಾ ಸಮರ್ಥ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೆ ಮಾತ್ರ ಅವರಿಗೆ ಈ ರಾತ್ರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ಆ ಬಗ್ಗೆಯೂ ಆಪ್‌ನಲ್ಲಿ ವಿವರ ದಾಖಲಿಸುವುದು ಕಡ್ಡಾಯವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರತಿ ತಿಂಗಳು ಈ ಹಾಜರಾತಿ ವರದಿಯನ್ನು ಪರಿಶೀಲಿಸಲಿದ್ದಾರೆ. ಈ ಪ್ರಾಯೋಗಿಕ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇಲಾಖೆಯ ಇತರೆ ನೌಕರರಿಗೂ ಇದನ್ನು ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

Scroll to Top