ಎಫ್‌ಎಸ್‌ಎಸ್‌ಎಐ ಕಟ್ಟುನಿಟ್ಟಿನ ಕ್ರಮ: ಹಾರ್ಲಿಕ್ಸ್, ನೆಸ್ಕೆಫೆ ಉತ್ಪನ್ನಗಳಿಗೆ ಶೋಕಾಸ್ ನೋಟಿಸ್!

(ನ್ಯೂಸ್‌ ಕಡಬ) newskadaba.com, ಅ.19.  ಜನಪ್ರಿಯ ಆಹಾರ ಮತ್ತು ಪಾನೀಯ ಉತ್ಪನ್ನಗಳ ಲೇಬಲ್ ಹಾಗೂ ಜಾಹೀರಾತುಗಳಲ್ಲಿ ಗ್ರಾಹಕರನ್ನು ದಾರಿತಪ್ಪಿಸುವ ಸಾಧ್ಯತೆಯಿರುವ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ನೆಸ್ಲೆ ಇಂಡಿಯಾ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

HULಗೆ ಸೇರಿದ ‘ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ಚಾಕೊಲೇಟ್’ ಉತ್ಪನ್ನದಲ್ಲಿ ಮಾಲ್ಟೋಡೆಕ್ಸ್ಟ್ರಿನ್ ಕಾರ್ಬೋಹೈಡ್ರೇಟ್ ಇದ್ದರೂ ‘ಸಕ್ಕರೆ ಸೇರಿಸಿಲ್ಲ’ ಎಂದು ನಮೂದಿಸಿರುವುದಕ್ಕೆ ಪ್ರಶ್ನೆ ಎತ್ತಲಾಗಿದೆ. ಜೊತೆಗೆ ಮೂಳೆಗಳ ಬಲ, ಸ್ನಾಯುಗಳ ಆರೋಗ್ಯ ಮತ್ತು ‘ಮಗುವಿನ ಆರೋಗ್ಯಕರ ತೂಕಕ್ಕಾಗಿ’ ನೀಡುವ ಭರವಸೆಗಳಿಗೆ ಸೂಕ್ತ ವೈಜ್ಞಾನಿಕ ಆಧಾರವಿದೆಯೇ ಎಂದು ಸ್ಪಷ್ಟನೆ ಕೋರಲಾಗಿದೆ.

ನೆಸ್ಲೆಯ ‘ನೆಸ್ಕೆಫೆ ಇಂಟೆನ್ಸ್ ಕೆಫೆ’, ‘ಚೊಕೊ ಮೋಚಾ’ ಮತ್ತು ‘ಚಿಲ್ಡ್ ಲ್ಯಾಟೆ’ ಉತ್ಪನ್ನಗಳ ಮುಂಭಾಗದಲ್ಲಿ ‘ಫ್ಲೇವರ್ಡ್ ಮಿಲ್ಕ್’ ಎಂದೂ, ಹಿಂಭಾಗದಲ್ಲಿ ‘ಡೈರಿ ಆಧಾರಿತ ಪಾನೀಯ’ ಎಂದೂ ವ್ಯತ್ಯಾಸವಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.ನೆಸ್ಲೆಯ ‘ರಿಸೋರ್ಸ್ ರೆನಲ್ ವೆನಿಲ್ಲಾ’ ಪೌಡರ್‌ಗೆ ವಿಶೇಷ ವೈದ್ಯಕೀಯ ನಿಯಮಗಳ ಅಡಿಯಲ್ಲಿ ಅಗತ್ಯ ಅನುಮತಿ ಪಡೆದಿರುವ ಬಗ್ಗೆ ಹಾಗೂ ಸಸ್ಯಾಹಾರಿ/ಮಾಂಸಾಹಾರಿ ಗುರುತಿನ ಚಿಹ್ನೆಗಳ ಬಗ್ಗೆ ವಿವರಣೆ ಕೇಳಲಾಗಿದೆ.ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬ್ಲಿಂಕಿಟ್‌ನಂತಹ ಆನ್‌ಲೈನ್ ತಾಣಗಳಲ್ಲಿ ತಪ್ಪು ಮಾಹಿತಿ ನೀಡುವ ಜಾಹೀರಾತುಗಳನ್ನು ಸರಿಪಡಿಸುವಂತೆ ಎಚ್ಚರಿಕೆ ನೀಡಲಾಗಿದೆ.ನಿಯಮ ಉಲ್ಲಂಘನೆ ದೃಢಪಟ್ಟರೆ ಕಂಪನಿಗಳ ವಿರುದ್ಧ ದಂಡ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪ್ರಾಧಿಕಾರ ನೀಡಿದೆ.

Scroll to Top