ರಿಕ್ಷಾ-ಸ್ಕೂಟರ್‌ ಮುಖಾಮುಖಿ ಢಿಕ್ಕಿಯಲ್ಲಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com, ಅ.19. ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು ಮುಕ್ರಂಪಾಡಿ ಸಮೀಪ ಆಟೋ ರಿಕ್ಷಾ ಹಾಗೂ ಸ್ಕೂಟರ್‌ ನಡುವೆ ಭೀಕರ ಢಿಕ್ಕಿ ಸಂಭವಿಸಿ, ಸ್ಕೂಟರ್ ಸವಾರೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರವಿವಾರ ಸಂಭವಿಸಿದೆ.
ಮೃತರನ್ನು ಮುಕ್ರಂಪಾಡಿ ನಿವಾಸಿ, ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್‌ ಅಸಿಸ್ಟೆಂಟ್‌ ಮಮತಾ (40) ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ಅವರು, ರಸ್ತೆ ಬಲಬದಿಗೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಎದುರಿನಿಂದ ಬಂದ ಆಟೋ ರಿಕ್ಷಾ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಮಮತಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ಓರ್ವ ಪ್ರಯಾಣಿಕ ಹಾಗೂ ರಿಕ್ಷಾ ಚಾಲಕ ಇಸಾಕ್‌ ಗಾಯಗೊಂಡಿದ್ದಾರೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top