
(ನ್ಯೂಸ್ ಕಡಬ) newskadaba.com, ಅ. 17 . ಕರಾವಳಿ ಭಾಗದಲ್ಲಿ ತೀವ್ರ ಮಳೆ ಅಭಾವ, ಸುಡುವ ಬಿಸಿಲು ಹಾಗೂ ಹೆಚ್ಚುತ್ತಿರುವ ಕೀಟಬಾಧೆಯಿಂದ ಸ್ಥಳೀಯ ತರಕಾರಿ ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ. ಇದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಶೇ. 50ರಷ್ಟು ಕುಸಿದಿದ್ದು, ಬೆಲೆಗಳು ಗಗನಕ್ಕೇರಿವೆ.
ಬೆಳೆ ನಷ್ಟದಿಂದ ಸಾಲ ಮಾಡಿರುವ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ನವರಾತ್ರಿ ಹಬ್ಬದ ಸೀಸನ್ನಲ್ಲಿ ತರಕಾರಿ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರ ದಿನನಿತ್ಯದ ಮನೆ ಖರ್ಚು ನಿಭಾಯಿಸುವುದು ಕಷ್ಟಕರವಾಗಿದೆ.
ಸ್ಥಳೀಯ ತರಕಾರಿಗಳ ಅಭಾವದಿಂದಾಗಿ ಬೇಡಿಕೆ ಪೂರೈಸಲು ವರ್ತಕರು ಚಿಕ್ಕಮಗಳೂರು, ಹಾಸನ ಮತ್ತು ಬೆಂಗಳೂರು ಮುಂತಾದ ಹೊರ ಜಿಲ್ಲೆಗಳಿಂದ ತರಕಾರಿ ತರಿಸುತ್ತಿದ್ದಾರೆ. ಇದರೊಂದಿಗೆ ಕಾಡುಪ್ರಾಣಿ ಹಾಗೂ ಪಕ್ಷಿಗಳ ಕಾಟವೂ ರೈತರ ನಿದ್ದೆಗೆಡಿಸಿದೆ.




