ವೃದ್ಧ ತಾಯಿಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದ ಮಗ: ಬ್ರಹ್ಮಾವರದಲ್ಲಿ ಅಮಾನವೀಯ ಘಟನೆ

(ನ್ಯೂಸ್‌ ಕಡಬ) newskadaba.com, ಸೆ.28  . ವೃದ್ಧ ತಾಯಿಯೊಬ್ಬರನ್ನು ಆಕೆಯ ಮಗನೇ ರಸ್ತೆ ಬದಿ ಬಿಟ್ಟು ಪರಾರಿಯಾದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.ಬ್ರಹ್ಮಾವರದ ಎಸ್‌ಎಂಎಸ್ ಇಂಗ್ಲಿಷ್ ಮೀಡಿಯಂ ಶಾಲೆ ಸಮೀಪ ವೃದ್ಧೆಯೊಬ್ಬರು ಅಸಹಾಯಕರಾಗಿ ತಿರುಗಾಡುತ್ತಿರುವುದನ್ನು ಶಾಲಾ ಬಸ್ ಚಾಲಕ ರಮಾನಾಥ್ ಶೆಣೈ ಗಮನಿಸಿದ್ದಾರೆ. ತಕ್ಷಣವೇ ಅವರು ಈ ಕುರಿತು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು 112 ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನೊಂದಿಗೆ ವೃದ್ಧೆಯನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ವೃದ್ಧೆ ತಮ್ಮ ಹೆಸರನ್ನು ಸರಸ್ವತಿ (70) ಹಾಗೂ ತಾವು ತಮಿಳುನಾಡಿನ ತಿರುವಳ್ಳುವೂರಿನ ನಿವಾಸಿ ಎಂದು ತಿಳಿಸಿದ್ದಾರೆ. ತಮ್ಮ ಮಗನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಈ ಘಟನೆ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

Scroll to Top