(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.08. ಮಹಾರಾಷ್ಟ್ರದಿಂದ ಕೇರಳದವರೆಗೆ ದಟ್ಟಮೋಡ ಕವಿದ ವಾತಾವರಣ ನಿರ್ಮಾಣವಾಗಿದೆಯಲ್ಲದೆ, ಮುಂಬಯಿಯಾದ್ಯಂತ ಭಾರೀ ಮಳೆಯಾಗಿದ್ದು, ಕರಾವಳಿಯಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಗುರುವಾರದಿಂದ ಕರಾವಳಿಯಲ್ಲಿ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ರಾಜ್ಯದೆಲ್ಲೆಡೆ ಜೂನ್ 10 ರವರೆಗೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಸಮುದ್ರದ ಮಟ್ಟದಲ್ಲಿ ಏರಿಕೆಯಾಗುವ ಲಕ್ಷಣಗಳಿದ್ದು, ಕಡಲ ತೀರದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ.