
(ನ್ಯೂಸ್ ಕಡಬ) newskadaba.com, ಸೆ.21 . ಕುಟುಂಬ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು, ಮಗುವಿನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ (ರಿಮಾಂಡ್) ವಿಧಿಸಿದೆ.
ಸೆಪ್ಟೆಂಬರ್ 19 ರಂದು ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪ ಕುಟುಂಬದ ಆಂತರಿಕ ಜಗಳದ ಕಾರಣಕ್ಕೆ ನೂರುನ್ನೀಸಾ, ತನ್ನ ಸ್ವಂತ ಮಗಳಾದ ಆಲಿಯಾ (2 ವರ್ಷ) ಹಾಗೂ ಗಂಡನ ತಂಗಿಯ ಮಗುವಾದ ರಬೀಹ್ (3 ವರ್ಷ) ಎಂಬಿಬ್ಬರನ್ನು ಮನೆಯಲ್ಲಿದ್ದ ಬಾವಿಗೆ ಎಸೆದಿದ್ದಳು.
ಈ ದುರಂತದಲ್ಲಿ 3 ವರ್ಷದ ರಬೀಹ್ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೊಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಭಾನುವಾರ ಪುತ್ತೂರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.




