(ನ್ಯೂಸ್ ಕಡಬ) newskadaba.com, ಸೆ. 04 ಝಾನ್ಸಿಯಲ್ಲಿ ಇನ್‌ಸ್ಟಾಗ್ರಾಮ್ ಪ್ರೀತಿ ದುರಂತ ಅಂತ್ಯ ಕಂಡಿದ್ದು, 27 ವರ್ಷದ ಶಿವಾನಿ ಕತ್ತು ಹಿಸುಕಿ ಕೊಲೆಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ, ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಶಿವಾನಿ ಹಾಗೂ ಗ್ವಾಲಿಯರ್ ಮೂಲದ ಯಶ್ ಠಾಕೂರ್ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು.
ಆವಾಸ್ ವಿಕಾಸ್ ಕಾಲೋನಿಯ ಬಾಡಿಗೆ ಮನೆಯಲ್ಲಿ ಶಿವಾನಿ ಹಾಸಿಗೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದ್ದು, ಮುಖದ ಮೇಲೆ 5 ಕಡೆ ಗಾಯಗಳ ಗುರುತುಗಳು ಪತ್ತೆಯಾಗಿವೆ.
ಆಗಸ್ಟ್ 31 ರಂದು ದಂಪತಿ ನಡುವೆ ಜಗಳ ನಡೆದಿದ್ದು, ಯಶ್ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಯಶ್, ಶಿವಾನಿಯ ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದು, ಆತನ ಕುಟುಂಬಸ್ಥರೂ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ.ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ ಯಶ್ ಮೇಲೆ ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ತಿಳಿದುಬಂದಿದೆ.ಎಸ್‌ಪಿ ಸಿಟಿ ಪ್ರೀತಿ ಸಿಂಗ್ ಹಾಗೂ ಸಿಒ ಸಿಟಿ ರಾಮ್‌ವೀರ್ ಸಿಂಗ್ ನೇತೃತ್ವದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಿಡಿಆರ್ (ಕಾಲ್ ರೆಕಾರ್ಡ್ಸ್) ಪರಿಶೀಲನೆ ಹಾಗೂ ಆರೋಪಿಯ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.








