(ನ್ಯೂಸ್ ಕಡಬ) newskadaba.com, ಸೆ. 04 ಬೆಂಗಳೂರು (ಯಶವಂತಪುರ) ಮತ್ತು ಮಂಗಳೂರು ಸೆಂಟ್ರಲ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ಸೆಪ್ಟೆಂಬರ್ 5ರಂದು ನಡೆಯಲಿದೆ. ಮಾರ್ಗದ ಕಾರ್ಯಸಾಧ್ಯತೆ ಹಾಗೂ ಪ್ರಯಾಣದ ಸಮಯವನ್ನು ಪರಿಶೀಲಿಸಲು ಭಾರತೀಯ ರೈಲ್ವೆ ಈ ಪರೀಕ್ಷಾರ್ಥ ಸಂಚಾರವನ್ನು ನಿಗದಿಪಡಿಸಿದೆ.
ಬೆಳಗ್ಗೆ 6:05ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮಧ್ಯಾಹ್ನ 2:25ಕ್ಕೆ ಮಂಗಳೂರು ತಲುಪಲಿದೆ. ಮರುಪ್ರಯಾಣದಲ್ಲಿ ಮಂಗಳೂರಿನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟು, ರಾತ್ರಿ 11:00 ಗಂಟೆಗೆ ಯಶವಂತಪುರ ತಲುಪಲಿದೆ.
ಕಡಿದಾದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ ಸಂಚರಿಸಲು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆಯುಳ್ಳ ವಿಶೇಷ ರೇಕ್ ಅಗತ್ಯವಿತ್ತು. ಇದೀಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಆಗಮಿಸಿರುವುದರಿಂದ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ.ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ಅಧಿಕೃತ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅನುಮೋದನೆ ದೊರೆಯಲಿದೆ.








