(ನ್ಯೂಸ್ ಕಡಬ) newskadaba.com ಸೆ. 01. ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಮತ್ತು ವಿಜಯಪುರ ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ 10 ರಿಂದ 22 ರವರೆಗೆ ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ರಾಜ್ಯದ 11 ಜಿಲ್ಲೆಗಳಿಂದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಹಾಗೂ ಕೇರಳ ಮತ್ತು ಕರ್ನಾಟಕದ ‘ಶಾಶ್ವತ ನೇಮಕಾತಿ’ (Permanent Category) ವಿಭಾಗದ ಅಭ್ಯರ್ಥಿಗಳಿಗಾಗಿ ರ್ಯಾಲಿಯನ್ನು ಆಯೋಜಿಸಲಾಗಿದೆ. 2026ರ ಜೂನ್ 1 ರಿಂದ 12 ಜೂನ್ 2026 ರವರೆಗೆ ನಡೆದ ಆನ್ ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CEE) ಅರ್ಹತೆ ಪಡೆದ ಅಗ್ನಿವೀರ ಮತ್ತು ಶಾಶ್ವತ ನೇಮಕಾತಿ ವಿಭಾಗದ ಅಭ್ಯರ್ಥಿಗಳನ್ನು ರ್ಯಾಲಿಗೆ ಆಹ್ವಾನಿಸಲಾಗಿದೆ.
ಸೈನ್ಯದಲ್ಲಿನ ವಿವಿಧ ವಿಭಾಗಗಳಿಗೆ ನೇಮಕಾತಿಗಾಗಿ ಈ ರ್ಯಾಲಿಯನ್ನು ಆಯೋಜಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದ ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳನ್ನು, ಮಂಗಳೂರಿನ ಸೈನ್ಯ ನೇಮಕಾತಿ ಕಚೇರಿ www.joinindianarmy.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ರ್ಯಾಲಿ ಅಧಿಸೂಚನೆಯಲ್ಲಿ ಆಯಾ ವಿಭಾಗಗಳಿಗೆ ಅನುಗುಣವಾಗಿ ನಿರ್ದಿಷ್ಟಪಡಿಸಲಾಗಿದೆ. ಆನ್ ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು www.joinindianarmy.nic.in ನಲ್ಲಿ ಪ್ರಕಟಿಸಲಾಗಿದೆ. ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರಗಳನ್ನು (Admit Cards) ನೀಡಲಾಗಿದೆ.
ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿ ಬಳಸಿ ಲಾಗಿನ್ ಆಗುವ ಮೂಲಕ ‘ಜಾಯಿನ್ ಇಂಡಿಯನ್ ಆರ್ಮಿ’ (Join Indian Army) ವೆಬ್ ಸೈಟ್ ನಿಂದಲೂ ಈ ಪ್ರವೇಶ ಪತ್ರಗಳನ್ನು ಪಡೆಯಬಹುದು. ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳ ಮೋಸಕ್ಕೆ ಬಲಿಯಾಗದಂತೆ ಸೂಚಿಸಲಾಗಿದೆ. ಆನ್ ಲೈನ್ ಸಿಇಇ (CEE) ಹಾಗೂ ನೇಮಕಾತಿ ರ್ಯಾಲಿಯ ಸಂದರ್ಭದಲ್ಲಿ ನಡೆಸಲಾಗುವ ಪರೀಕ್ಷೆಗಳಲ್ಲಿನ ಅಭ್ಯರ್ಥಿಗಳ ಸಾಧನೆ ಮತ್ತು ಅಂತಿಮ ಅರ್ಹತಾ ಪಟ್ಟಿಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 10ರಿಂದ ವಿಜಯಪುರದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿ












