(ನ್ಯೂಸ್ ಕಡಬ) newskadaba.com ಆ. 30. ಕೆಲವೇ ಪಂಗಡಗಳ ಗುರುವಾಗಿ ನಾರಾಯಣ ಗುರುಗಳನ್ನು ಸೀಮಿತಗೊಳಿಸಲಾಗದು. ಅವರು ಲೋಕ ಸಂತರು. ಜಾತಿ- ಮತ, ಬೇಧಭಾವಗಳನ್ನು ಬದಿಗಿರಿಸಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮಾನವೀಯ ಸಂದೇಶವನ್ನು ಲೋಕಕ್ಕೆ ಸಾರಿದ ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳು ಎಂದು ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗದವರಿಗೆ ದೇವಾಲಯ ಪ್ರವೇಶ ಸೇರಿದಂತೆ ಸಾಮಾಜಿಕ ಸಮಾನತೆಯ ಹಕ್ಕುಗಳಿಗೆ ಶಾಂತಿಯುತವಾದ ಮಾರ್ಗದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದವರು. ಮಹಾತ್ಮ ಗಾಂಧಿ, ರವೀಂದ್ರನಾಥ್ ಟಾಗೋರ್ ಅವರಂತಹ ಮಹನೀಯರು ಗುರುಗಳ ವಿಚಾರಧಾರೆ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. ನಾರಾಯಣ ಗುರುಗಳ ಚಿಂತನೆಗಳು, ಆದರ್ಶ ಸಮಾಜಕ್ಕೆ ದಾರಿದೀಪ. ನಾರಾಯಣ ಗುರು ಜಯಂತಿಯು ಕೇವಲ ಒಂದು ಸಮುದಾಯದ ಆಚರಣೆಯಾಗದೆ, ಎಲ್ಲಾ ಸಮಾಜದವರು ಒಟ್ಟಾಗಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಉಡುಪಿ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಉಪನ್ಯಾಸ ನೀಡಿ, ಸಮಾಜವನ್ನು ಸಂಯಮದಿಂದ ಕಟ್ಟಿದ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರು ಸಾರಿದ ಸಮಾನತೆ, ಶಿಕ್ಷಣ, ಮಾನವೀಯತೆಯ ಚಿಂತನೆಗಳನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ, ಸಮಾಜದ ಪ್ರತಿಯೊಂದು ಹಂತದಲ್ಲೂ ಅನುಷ್ಠಾನಗೊಳಿಸುವ ಅಗತ್ಯವಿದೆ. ಅವರ ಸಂದೇಶಗಳನ್ನು ಅನುಷ್ಠಾನ ಮಾಡುವ ಸಂಕಲ್ಪ ಮಾಡಬೇಕು. ಸುಧಾರಣೆಯ ಆಯಾಮಗಳಲ್ಲಿ ಬಳಸಿದ ಗುರುಗಳ ಮಾನವತಾವಾದದ ಶ್ರೇಷ್ಠ ಆಲೋಚನೆಗಳು, ತತ್ವಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಶಾಸಕ ಡಿ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಹೆಚ್ ಸೋಮಸುಂದರಂ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಮತ್ತಿತ್ತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.








