(ನ್ಯೂಸ್ ಕಡಬ) newskadaba.com ಆ. 27. ಖಾಸಗಿಯವರ ಜಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ತಾಗಿರುವ ಮರಗಳನ್ನು ತೆರವು ಮಾಡಿದಾಗ ಮರವನ್ನು ಕಡಿದ ಹಾಗೇ ನಿನ್ನನ್ನೂ ಕಡಿದು ಕೊಚ್ಚುತ್ತೇನೆ ಎಂದು ಮಚ್ಚು ತೋರಿಸಿ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಇಂತಹ ಭಯದ ವಾತಾವರಣದಲ್ಲಿ ನಾವು ಹೇಗೆ ಕೆಲಸ ಮಾಡುವುದು ಎಂದು ಮೆಸ್ಕಾಂ ಜೆಇ ಜನ ಸಂಪರ್ಕ ಸಭೆಯಲ್ಲಿ ಅಳಲು ತೋಡಿಕೊಂಡರು.
ಮಸ್ಕಾಂ ಮಂಗಳೂರು ವೃತ್ತ ಅಧೀರ್ ಕೃಷ್ಣ ರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಕಡಬ ಮೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿದ್ಯಮಾನ ನಡೆಯಿತು.
ಸತೀಶ್ ಎಂಬವರು ವಿಷಯ ಪ್ರಸ್ತಾಪಿಸಿ, ನೆಲ್ಯಾಡಿ ಸಮೀಪದ ಅಲಂಪಾಡಿ ಭಾಗದಲ್ಲಿ ವಿದ್ಯುತ್ ಲೈನ್ ಗೆ ತಾಗಿಕೊಂಡಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಜೆಇ ರಾಮಣ್ಣ ಖಾಸಗಿ ಸ್ಥಳದಲ್ಲಿದ್ದ ಅಪಾಯಕಾರಿಯಾಗಿದ್ದ ತೆಂಗಿನ ಮರವನ್ನು ಮರದ ವಾರೀಸುದಾರರ ಸಮ್ಮುಖದಲ್ಲೇ ಕಡಿದು ತೆರವು ಮಾಡಿದ್ದೇವೆ. ಬಳಿಕ ಅಲ್ಲಿನ ವ್ಯಕ್ತಿ ನನ್ನನ್ನು ಉದ್ದೇಶಿಸಿ ತೆಂಗಿನ ಮರವನ್ನು ಕಡಿದ ಹಾಗೇ ನಿನ್ನರೂ ಕೊಟ್ಟಿದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡರು.
ಪ್ರಕರಣ ದಾಖಲಿಸಲು ಹೋದರೆ ಅಲ್ಲಿ ಸೇರಿ ದವನು, ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಿ ದೂರು ನೀಡದಂತೆ ತಡೆದರು ಎಂದು ಹೆಳಿದರು.
ಮೆಸ್ಕಾಂ ಅಧೀಕ್ಷಕ ಕೃಷ್ಣ ರಾಜ್, ಎಲ್ಲರೂ ಹಾಗೆ ಮಾಡುವುದಿಲ್ಲ ಹೆಚ್ಚಿನ ಗ್ರಾಹಕರು ಸಹಕರಿಸುತ್ತಾರೆ. ಅಂತಹ ಸಂದರ್ಭ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು.
ಉಮೇಶ್ ಮಡ್ಯಡ್ಕ ಮಾತನಾಡಿ, ಕೋಡಿಂಬಾಳ ಗ್ರಾಮದ ಮಧ್ಯಡ್ಕ-ಚಾಕೋಟೆ ರಸ್ತೆ ಅಭಿವೃದ್ಧಿಪಡಿಸಲು ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳು ಅಡ್ಡಿಯಾಗಿವೆ.
ಒಂದು ಕಿಲೋಮೀಟರ್ ತನಕದ ಈ ರಸ್ತೆ ಬದಿಯಲ್ಲಿ ಐವತ್ತಕ್ಕಿಂತಲೂ ಹೆಚ್ಚು ವಿದ್ಯುತ್ ಕಂಬಗಳನ್ನು ಅವೈಜ್ಞಾನಿಕವಾಗಿ ಹಾಕಲಾಗಿದೆ.
ಮೆಸ್ಕಾಂನವರು ಕಂಬ ತೆರವು ಮಾಡಿದರೆ ರಸ್ತೆ ಅಭಿವೃದ್ಧಿ ಮಾಡುವುದಾಗಿ ಪಟ್ಟಣ ಪಂಚಾಯಿತಿಯವರು ಹೇಳುತ್ತಾರೆ ಎಂದು ದೂರಿದರು. ರಸ್ತೆಯ ಒಂದು ಭಾಗದಲ್ಲಿ ಎಲ್ಲ ಲೈನ್‌ಗಳನ್ನು ಹಾಕಿ ಇನ್ನೊಂದು ಭಾಗದಲ್ಲಿಸುವ ಕಂಬಗಳನ್ನು ತರವು ಮಾಡಿ ಸಮಸ್ಯೆ ಬಗೆಹರಿಸಬೇಕು, ಇದಕ್ಕೆ ಪಂಚಾಯತ್ ನವರು ಪತ್ರ ನೀಡಬೇಕು ಎಂದು ಜಿಲ್ಲಾ ಅಧೀಕ್ಷಕ ಕೃಷ್ಣರಾಜ್ ಹೇಳಿದರು.
ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ನೀಗಿಸಿ, ರಾತ್ರಿ ವೇಳೆ ವಿದ್ಯುತ್ ವ್ಯತ್ಯಯವಾದಾಗ ಕರೆ ಸ್ವೀಕರಿಸಬೇಕು. ದುರಸ್ತಿ ವೇಳೆ ವಿದ್ಯುತ್ ಕಡಿತದ ಅವಧಿ ಹಾಗೂ ಪೂರೈಕೆ ಪುನರಾರಂಭದ ಬಗ್ಗೆ ಸರಿಯಾದ ಮಾಹಿತಿ ನೀಡಿ, ಆಲಂಕಾರಿನಲ್ಲಿ ಶೀಘ್ರ ಸಬ್ ಸ್ಟೇಷನ್ ಪ್ರಾರಂಭಿಸಿ ಕೊಯಿಲದಲ್ಲಿರುವ ಮೆಸ್ಕಾಂ ಸಬ್ ಸ್ಟೇಷನ್ ನ್ನು ಶೀಘ್ರ ಲೋಕಾರ್ಪಣೆ ಮಾಡಬೇಕು ಎಂದು ಮತ್ತಿತರ ಬೇಡಿಕೆಗಳನ್ನು ಮಂಡಿಸಲಾಯಿತು.
ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಅಧಿಕಾರಿಗಳು ತಿಳಿಸಿದರು.
ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕೆ.ಎಂ., ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಗಿರೀಶ್ ಬದನೆ ಮತ್ತಿತರರು ಸಲಹೆ ಸೂಚನೆ ನೀಡಿದರು.
ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಕಡಬ ಮೆಸ್ಕಾಂ ಎಇಇ ಸಜಿ, ಶಾಖಾಧಿಕಾರಿಗಳಾದ ಸತ್ಯನಾರಾಯಣ, ಪ್ರೇಮ್ ಕುಮಾರ್, ಪ್ರಶಾಂತ್ ಹಾಗೂ ಮೇಲ್ವಿಚಾರಕರಾದ ಮನೋಜ್, ರಾಜನ್, ಪ್ರೇಮ್ ಕುಮಾರ್, ಮತ್ತಿತರರು ಉಪತರಿದ್ದರು. ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಕೆ. ಸ್ವಾಗತಿಸಿ, ವಂದಿಸಿದರು.








