(ನ್ಯೂಸ್ ಕಡಬ) newskadaba.com ಆ. 27. ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ನಡುವೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಮತ್ತು ಸಂಗಮೇಶ್ ಕನಕಪುರ ಅವರನ್ನು ರಕ್ಷಿಸಲಾಗಿದ್ದು, ಇಬ್ಬರೂ ಸದ್ಯ ಸುರಕ್ಷಿತವಾಗಿದ್ದಾರೆ. ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಅವರೊಂದಿಗೆ ಸಂಪರ್ಕಿಸಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.
ಮಲ್ಲಿನಾಥ್ ಮತ್ತು ಸಂಗಮೇಶ್ ಸೇರಿದಂತೆ ಹೈದರಾಬಾದ್ನ 23 ಮಂದಿ ಒಟ್ಟು 25 ಜನರು ನೇಪಾಳಕ್ಕೆ ತೆರಳಿದ್ದರು ಎನ್ನಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಅವರು ಸಿಲುಕಿರುವ ಮಾಹಿತಿ ದೊರೆತ ಬಳಿಕ ಕರ್ನಾಟಕ ಸರ್ಕಾರ ರಕ್ಷಣಾ ಕಾರ್ಯಕ್ಕೆ ಮುಂದಾಗಿತ್ತು.
ಇದೀಗ ಇಬ್ಬರನ್ನು ನೇಪಾಳದಿಂದ ದೆಹಲಿಗೆ ಕರೆತರಲು ಕರ್ನಾಟಕ ಸರ್ಕಾರ ವ್ಯವಸ್ಥೆ ಮಾಡುತ್ತಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ವಸತಿ ಸೇರಿದಂತೆ ಅಗತ್ಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ನಡುವೆ ನೇಪಾಳದ ಜಲಪ್ರಳಯದ ಪರಿಣಾಮ ಗಂಡಕ್ ನದಿಯ ನೀರಿನ ಮಟ್ಟವೂ ಏರಿಕೆಯಾಗಿದ್ದು, ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನದಿ ತೀರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.













