(ನ್ಯೂಸ್ ಕಡಬ) newskadaba.com, ಆ.22 ಪುತ್ತೂರು: ದರ್ಬೆಯ ‘ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರ’ದಲ್ಲಿ ದಾಖಲೆ ಲ್ಯಾಮಿನೇಷನ್ ಮಾಡುವ ವಿಚಾರವಾಗಿ ಉಂಟಾದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ಆರೋಪಿ ಸುದರ್ಶನ್ ಪೈ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ಅವರು ನೀಡಿದ ದೂರಿನನ್ವಯ, ಆಗಸ್ಟ್ 21ರಂದು ನೀಡಿದ್ದ ದಾಖಲೆ ಲ್ಯಾಮಿನೇಷನ್ ವೇಳೆ ಹಾನಿಗೊಳಗಾಗಿತ್ತು. ಅದನ್ನು ಸರಿಪಡಿಸಿಕೊಡುವಂತೆ ಅಥವಾ ₹300 ಹಣ ಹಿಂತಿರುಗಿಸುವಂತೆ ಕೇಳಿದಾಗ ಕೇಂದ್ರದ ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ BNS ಕಲಂ 352, 115(2), 109, 3(5) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಂದ್ರದ ಮಾಲೀಕರಾದ ಅಂಜನಾ ಎಸ್. ಪೈ (50) ಅವರು ನೀಡಿದ ದೂರಿನಲ್ಲಿ, ತಾಂತ್ರಿಕ ದೋಷದಿಂದ ದಾಖಲೆ ಹಾನಿಯಾಗಿದ್ದಕ್ಕೆ ಗ್ರಾಹಕರು ₹10,000 ಪರಿಹಾರ ನೀಡುವಂತೆ ಪಟ್ಟು ಹಿಡಿದು ಗಲಾಟೆ ಮಾಡಿದ್ದಾರೆ. ಅಲ್ಲದೆ, ಸ್ಥಳದಲ್ಲಿ ವಿಡಿಯೋ ಮಾಡಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರತಿಯೂರು ದಾಖಲಿಸಿದ್ದಾರೆ.








