(ನ್ಯೂಸ್ ಕಡಬ) newskadaba.com, ಆ.10 :ತೊಕ್ಕೊಟ್ಟಿನ ವಿನಮ್ರ ಬಾರ್ನಲ್ಲಿ ತಲವಾರು ಬೀಸಿ ಸಾರ್ವಜನಿಕರಿಗೆ ಹಾಗೂ ಬಾರ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಹಾಗೂ ಮಂಚಿಲ ನಿವಾಸಿ, ಆಟೋರಿಕ್ಷಾ ಚಾಲಕ ಅಶ್ಫಾಕ್ (28)
ಭಾನುವಾರ ರಾತ್ರಿ ಸುಮಾರು 12:00 ರಿಂದ 12:20 ರ ನಡುವೆ ಅಶ್ಫಾಕ್ನ ರಿಕ್ಷಾದಲ್ಲಿ ಬಂದ ಶಾಕಿರ್, ತಲವಾರು ಹಿಡಿದು ಸಾರ್ವಜನಿಕರನ್ನು ಭಯಭೀತಗೊಳಿಸಿದ್ದಾನೆ. ಬಾರ್ಗೆ ನುಗ್ಗಿ ಮಾರಕಾಸ್ತ್ರ ಬೀಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾರ್ ಬಂದ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ.
ದಾಂಧಲೆಯ ದೃಶ್ಯಗಳು ಬಾರ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಲವಾರು ಕಂಡ ಗ್ರಾಹಕರು ಭಯದಿಂದ ಸ್ಥಳದಿಂದ ಓಡಿಹೋಗಿದ್ದಾರೆ.
ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಕಾನೂನು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ರೌಡಿಶೀಟರ್ ಶಾಕಿರ್ ವಿರುದ್ಧ ಈಗಾಗಲೇ ಉಳ್ಳಾಲ ಠಾಣೆಯಲ್ಲಿ ಹಲವಾರು ಅಪರಾಧ ಪ್ರಕರಣಗಳು ದಾಖಲಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.








