(ನ್ಯೂಸ್ ಕಡಬ) newskadaba.com ಆ. 03. ಇಟ್ಟಿಗೆಗೂಡು ಕುಸಿದು ಬಿಸಿ ಇಟ್ಟಿಗೆ ಮತ್ತು ಉರಿಯುತ್ತಿದ್ದ ಬೆಂಕಿಯ ಬೂದಿಯ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಬೂದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತಪಟ್ಟ ಕಾರ್ಮಿಕರನ್ನು ಬೂದಹಳ್ಳಿ ಗ್ರಾಮದ ರಾಜೇಶ್ (32), ನಾರಾಯಣ(53) ಮತ್ತು ನಾಗರಾಜ್ (62) ದುರಂತದಲ್ಲಿ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ 6 ಗಂಟೆಗೆ ರಾಜೇಶ್, ನಾರಾಯಣ ಹಾಗೂ ನಾಗರಾಜು ಕೆಲಸಕ್ಕೆ ತೆರಳಿದ್ದರು. ಇಟ್ಟಿಗೆ ಬೇಯಿಸಲು ಹಾಕಿದ್ದ ಬೆಂಕಿ ಮತ್ತು ಕಾವು ಸಂಪೂರ್ಣವಾಗಿ ಆರುವ ಮೊದಲೇ, ಯಾವುದೇ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸದೆ ಇಟ್ಟಿಗೆ ಗೂಡು ತೆರೆಯುವ ಕೆಲಸದಲ್ಲಿ ಕಾರ್ಮಿಕರನ್ನು ತೊಡಗಿಸಲಾಗಿತ್ತು ಎನ್ನಲಾಗಿದೆ. ಬೆಳಿಗ್ಗೆ ಸುಮಾರು 11:30ರ ವೇಳೆಗೆ ಇಟ್ಟಿಗೆ ಗೂಡು ಏಕಾಏಕಿ ಕುಸಿದುಬಿದ್ದು, ಕಾಂಗಾಯಿಸುತ್ತಿದ್ದ ಇಟ್ಟಿಗೆಗಳು ಹಾಗೂ ಬೆಂಕಿಯ ಬೂದಿ ಕಾರ್ಮಿಕರ ಮೇಲೆ ಬಿದ್ದಿದೆ. ತೀವ್ರ ಸುಟ್ಟಗಾಯಗಳಿಂದ ರಾಜೇಶ್ ಮತ್ತು ನಾರಾಯಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ತಕ್ಷಣವೇ ಟಿ. ನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯಾಹ್ನ 3:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.












