ಅಂತರ್ ರಾಜ್ಯ ಬೈಕ್‌ ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು ► 17 ಬೈಕ್ ಗಳೊಂದಿಗೆ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಐಷಾರಾಮಿ ಬದುಕಿಗಾಗಿ ಬೈಕ್ ಗಳನ್ನು ಕಳ್ಳತನ ಪ್ರಕರಣವನ್ನು ಭೇದಿಸಿರುವ ಮಂಗಳೂರು ಕೇಂದ್ರ ಉಪ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರದಂದು ನಡೆದಿದೆ.

ಬಂಧಿತ ಆರೋಪಿಗಳನ್ನು ಕೇರಳದ ಅರ್ಜುನ್ ಕೆ.ಬಿ, ರೋಬಿನ್ ಬೇಬಿ ಹಾಗೂ ಟಿಜೋ ಜೋಸೆಪ್ ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಯಲ್ ಎನ್ ಫೀಲ್ಡ್ ಬುಲೇಟ್, ಕೆಟಿಎಮ್, ಯಮಹಾ ಆರ್15, ಬಜಾಜ್ ಪಲ್ಸರ್, ಸುಜುಕಿ ಜಿಕ್ಸರ್ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. ಈ ಕುರಿತು ಮಂಗಳೂರು ಕೇಂದ್ರ ಉಪ ವಿಭಾಗ ವಿಭಾಗದ ಠಾಣೆಗಳಲ್ಲಿ ಮತ್ತು ನಗರದ ಇತರ ಠಾಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ದ್ವಿ ಚಕ್ರ ವಾಹನಗಳ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಮಂಗಳೂರು ಕೇಂದ್ರ ಉಪ ವಿಭಾಗದ ಉತ್ತರ ಪೊಲೀಸ್ ಠಾಣೆ ಮತ್ತು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.‌

ಈ ತಂಡ ಕಳೆದ ಒಂದು ವಾರದಿಂದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂರು ಜನ ಆರೋಪಿಗಳನ್ನು ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ 5 ಜನ ಬಾಲಕರನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತರನ್ನು ವಿಚಾರಿಸಿದಾಗ ಶೋಕಿ ಜೀವನ ನಡೆಸುವ ಸಲುವಾಗಿ ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ದುಬಾರಿ ಬೆಲೆಯ ವಿವಿಧ ಮಾದರಿಯ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಇದಕ್ಕಾಗಿ ವಿವಿಧ ದಿನಗಳಲ್ಲಿ ಬೇರೆ ಬೇರೆ ಬೈಕ್ ಗಳಲ್ಲಿ, ರೈಲಿನಲ್ಲಿ ಮತ್ತು ಶವರ್ಲೇಟ್ ಟವೇರಾ ಕಾರು ಮತ್ತು ಇನೋವಾ ಕಾರಿನಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಮಂಗಳೂರಿಗೆ ಬರುತ್ತಿದ್ದರು. ಮಧ್ಯರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ರಸ್ತೆ ಬದಿಯಲ್ಲಿ ರಾಯಲ್ ಎನ್ ಪೀಲ್ಡ್ ಬೈಕ್, ಕೆಟಿಎಮ್ ನಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳನ್ನು ಕಳವು ಮಾಡಿಕೊಂಡು ಮೋಟಾರು ಸೈಕಲ್ ಗಳನ್ನು ಕೊಂಡು ಹೋಗಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಒಟ್ಟು 17 ದ್ವಿಚಕ್ರ ವಾಹನ ಗಳನ್ನು ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿದ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Also Read  ಬಶೀರ್ ಅಂತ್ಯಕ್ರಿಯೆಗೆ ಹರಿದು ಬಂತು ಜನಸಾಗರ ► ಸರ್ವ ಧರ್ಮೀಯರಿಂದ ಅಂತಿಮ ವಿದಾಯ

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ
ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಮ್. ಜಗದೀಶ್ ನೇತೃತ್ವದಲ್ಲಿ ಮಂಗಳೂರು ಉತ್ತರ ಠಾಣಾ ಪೊಲೀಸ್ ನಿರೀಕ್ಷಕರಾದ ಯೋಗಿಶ್ ಕುಮಾರ್ ಬಿಸಿ, ಮಂಗಳೂರು ಪೂರ್ವ ಠಾಣಾ ಪಿಎಸ್ಐ (ಕ್ರೈಂ) ನೀತು ಆರ್. ಗುಡೆ, ಎಎಸ್ಐ ಅನಂತ ಮುರುಡೇಶ್ವರ, ಸಿಬ್ಬಂದಿಗಳಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಗಿರೀಶ್ ಕುಂಬ್ಳೆ, ಅಜಿತ್ ಮಾಥ್ಯೂ, ಆಶಿತ್ ಕಿರಣ್, ಪ್ರಶಾಂತ್ ಶೆಟ್ಟಿ, ಶಿವಪ್ಪ, ಕಿಶೋರ್ ಸುರೇಂದ್ರ, ದೇವಿ ಪ್ರಸಾದ್, ಸತೀಶ್ ಉತ್ತರ ಠಾಣೆಯ ದಯಾನಂದ, ವಾಸು, ಸುಜನ್, ಬಸವರಾಜ್ ಚಾಲಕರಾದ ಗುರುರಾಜ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು. ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಸಿದ್ದು, ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

Also Read  ಕಡಬ: ಅಕ್ರಮ ಗೋಸಾಗಾಟ, ಕಸಾಯಿಖಾನೆ ತಡೆಗೆ ಆಗ್ರಹಿಸಿ ವಿಹಿಂಪ ಮನವಿ

error: Content is protected !!
Scroll to Top