(ನ್ಯೂಸ್ ಕಡಬ) newskadaba.com ಜು. 15. ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಗಾದೆಯ ನಡುವೆ, ಆನೆಯೊಂದು ತನ್ನ ಹಳೆಯ ಹಗೆಯನ್ನು ಮರೆಯದೆ ಬರೋಬ್ಬರಿ 14 ವರ್ಷಗಳ ಬಳಿಕ ಕುಟುಂಬವೊಂದನ್ನು ಹುಡುಕಿಕೊಂಡು ಬಂದು ದಾಳಿ ನಡೆಸಿರುವ ದಿಗಿಲು ಹುಟ್ಟಿಸುವ ಘಟನೆ ನೇಪಾಳದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರನ್ನು ಈ ಕಾಡಾನೆ ಬಲಿ ಪಡೆದಿದೆ.
ಘಟನೆಯ ಹಿನ್ನೆಲೆ: ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ಶನಿಚರ ಬೋಟೆ ಎಂಬುವವರ ಕುಟುಂಬ ವಾಸವಾಗಿತ್ತು. ಡಿಸೆಂಬರ್ 2012 ರಲ್ಲಿ ‘ಧುರ್ಬೆ’ ಹೆಸರಿನ ಕಾಡಾನೆಯು ಶನಿಚರ ಬೋಟೆ ಅವರ ತಂದೆ-ತಾಯಿಯನ್ನು ತುಳಿದು ಸಾಯಿಸಿತ್ತು.
ಆನೆಯ ಭೀತಿಯಿಂದಾಗಿ ಶನಿಚರ ಬೋಟೆ ತಮ್ಮ ಕುಟುಂಬದ ರಕ್ಷಣೆಗಾಗಿ ನದಿಯೊಂದನ್ನು ದಾಟಿ, ಅಲ್ಲಿಂದ 14 ಕಿ.ಮೀ ದೂರದ ಜಗತ್ಪುರ್ ಪ್ರದೇಶಕ್ಕೆ ವಲಸೆ ಹೋಗಿ ನೆಲೆಸಿದ್ದರು. ನದಿ ದಾಟಿ ದೂರ ಹೋದರೂ ಬಿಡದ ಆನೆ, ಇಷ್ಟು ವರ್ಷಗಳ ನಂತರ ಇವರ ಹೊಸ ವಾಸಸ್ಥಳವನ್ನು ಹುಡುಕಿಕೊಂಡು ಬಂದು ದಾಳಿ ಮಾಡಿದೆ. ಈ ಭೀಕರ ದಾಳಿಯಲ್ಲಿ ಶನಿಚರ ಬೋಟೆ ಅವರ ಸೊಸೆ ಹಾಗೂ ಪುಟ್ಟ ಮಗು ಮೃತಪಟ್ಟಿದ್ದಾರೆ.
ದೊಡ್ಡ ನದಿ ದಾಟಿ ಬಂದರೆ ಸುರಕ್ಷಿತವಾಗಿರಬಹುದು ಅಂದುಕೊಂಡಿದ್ದ ನಮಗೆ ಆನೆ ಮತ್ತೆ ಹುಡುಕಿ ಬಂದು ಸೊಸೆ ಮತ್ತು ಮಗುವನ್ನು ಕೊಂದಿರುವುದು ತೀವ್ರ ಆಘಾತ ತಂದಿದೆ. ಈಗ ನಾವು ರಕ್ಷಣೆಗಾಗಿ ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಶನಿಚರ ಬೋಟೆ ಅಳಲು ತೋಡಿಕೊಂಡಿದ್ದಾರೆ.














