(ನ್ಯೂಸ್ ಕಡಬ) newskadaba.com ಜು. 13. ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಮುಂದೂಡಲ್ಪಟ್ಟಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಸಲು ಸರ್ಕಾರ ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ಎಲ್ಲ ರಾಜಕೀಯ ಪಕ್ಷಗಳಲ್ಲೂ ಚಟುವಟಿಕೆಗಳು ಗರಿಗೆದರಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಅಕ್ಟೋಬರ್/ನವೆಂಬರ್ನಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈ ಚುನಾವಣೆಗಳು ಕೇವಲ ಸ್ಥಳೀಯ ಆಡಳಿತ ಬದಲಾವಣೆಯಷ್ಟೇ ಅಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿಯೂ ಪರಿಣಮಿಸಲಿವೆ.
ಆಡಳಿತಾರೂಢ ಕಾಂಗ್ರೆಸ್ಗೆ ತಮ್ಮ ಗ್ಯಾರಂಟಿ ಯೋಜನೆಗಳ ಪ್ರಭಾವವನ್ನು ಪರೀಕ್ಷಿಸಲು ಇದು ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಗ್ರಾಮೀಣ ಮಟ್ಟದಲ್ಲಿ ತಮ್ಮ ಅಸ್ತಿತ್ವ ಗಟ್ಟಿಗೊಳಿಸಲು ಇದು ಅಗ್ನಿಪರೀಕ್ಷೆಯಾಗಿದೆ.
ಸಿದ್ಧತೆಗಳು ಮತ್ತು ವಿಳಂಬಕ್ಕೆ ಕಾರಣಗಳು:
ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆಯಾಗಲಿದೆ. ಅಗತ್ಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕ, ಕ್ಷೇತ್ರಗಳ ಮರುವಿಂಗಡಣೆ, ಆಡಳಿತಾತ್ಮಕ ಬದಲಾವಣೆಗಳು ಮತ್ತು ಕೆಲವು ಗ್ರಾಮ ಪಂಚಾಯತ್ ಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ ಏರಿಸಿದ ಕಾರಣಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಚುನಾವಣೆ ವಿಳಂಬವಾಗಿತ್ತು.
ಚುನಾವಣೆಯ ಅಗತ್ಯತೆ:
ದೀರ್ಘಕಾಲದಿಂದ ಚುನಾವಣೆ ನಡೆಯದಿರುವುದು ಗ್ರಾಮೀಣ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಚುನಾಯಿತ ಪ್ರತಿನಿಧಿಗಳ ಆಯ್ಕೆಯಿಂದ ಅಧಿಕಾರ ವಿಕೇಂದ್ರಿಕರಣಗೊಂಡು ಪ್ರಜಾಪ್ರಭುತ್ವ ಬಲವರ್ಧನೆಯಾಗುತ್ತದೆ, ಸ್ಥಳೀಯ ಸಮಸ್ಯೆಗಳಿಗೆ ನೇರ ಪರಿಹಾರ ಸಿಗುತ್ತದೆ ಮತ್ತು ಕೇಂದ್ರ–ರಾಜ್ಯ ಸರ್ಕಾರಗಳ ಅನುದಾನಗಳು ಸಮರ್ಪಕವಾಗಿ ಬಳಕೆಯಾಗುತ್ತವೆ.
ರಾಜ್ಯ ಸರ್ಕಾರವು ಎಲ್ಲಾ ಹಂತದ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಆಸಕ್ತಿ ಹೊಂದಿದ್ದು, ಈ ಕುರಿತಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.













