ಮನೆಯ ಬಳಿಯೇ ಬೂತ್, ಮಕ್ಕಳಿಗೆ ವೋಟಿಂಗ್ ಸಂಭ್ರಮ ಕಡಬದ ಓಂತ್ರಡ್ಕದಲ್ಲಿ ನೈಜ ಇಲೆಕ್ಷನ್ ಫೀಲಿಂಗ್!



(ನ್ಯೂಸ್ ಕಡಬ) newskadaba.com ಜು. 06. ಶಾಲಾ ಮಕ್ಕಳಿಗೆ ಕೇವಲ ಪಠ್ಯಪುಸ್ತಕಗಳ ಮೂಲಕ ಮಾತ್ರವಲ್ಲದೆ, ಪ್ರಾಯೋಗಿಕ ಅನುಭವದ ಮೂಲಕವೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸಬಹುದು ಎಂಬುದನ್ನು ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸಾಬೀತುಪಡಿಸಿದೆ.







ಇದಕ್ಕಾಗಿ ಶಾಲಾ ಸಚಿವ ಸಂಪುಟ ರಚನೆಗಾಗಿ ಈ ಬಾರಿ ವಿದ್ಯಾರ್ಥಿಗಳಿಗೆ ತಮ್ಮ ಮನೆಯ ಸಮೀಪದಲ್ಲೇ ಸ್ಥಾಪಿಸಲಾದ ವಿಶೇಷ ಮತಗಟ್ಟೆಗಳಲ್ಲಿ ಮತದಾನ ಮಾಡುವ ಅಪೂರ್ವ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಮಕ್ಕಳಿಗೆ ನೈಜ ವಿಧಾನಸಭಾ ಚುನಾವಣೆಯ ಸಂಪೂರ್ಣ ಅನುಭವವನ್ನು ನೀಡಲಾಯಿತು.






ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ಕೇವಲ ಓದಿ ತಿಳಿಯದೆ, ಅದರ ಪ್ರತಿಯೊಂದು ಹಂತವನ್ನು ಸ್ವತಃ ಅನುಭವಿಸಬೇಕು ಎಂಬ ಉದ್ದೇಶದಿಂದ ಶಾಲೆಯ ಪದವೀಧರ ಶಿಕ್ಷಕರಾದ ದಿಲೀಪ್ ಕುಮಾರ್ ಸಂಪಡ್ಕ ಅವರು ಈ ಹೊಸ ಪ್ರಯೋಗವನ್ನು ರೂಪಿಸಿದ್ದರು. ಮತದಾನದ ಪ್ರಕ್ರಿಯೆ, ಮತಗಟ್ಟೆಯ ವಾತಾವರಣ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸುವಲ್ಲಿ ಈ ಪ್ರಯತ್ನ ಯಶಸ್ವಿಯಾಗಿದೆ.

 

ಸಾಮಾನ್ಯ ಚುನಾವಣೆಯ ಮಾದರಿಯಲ್ಲೇ ಶಾಲಾ ಚುನಾವಣೆಯನ್ನು ರೂಪಿಸಲಾಗಿತ್ತು. ಅಧಿಸೂಚನೆ ಪ್ರಕಟಿಸುವುದರಿಂದ ಹಿಡಿದು ಮತದಾರರ ಪಟ್ಟಿ ಸಿದ್ಧಪಡಿಸುವುದು, ಅಭ್ಯರ್ಥಿಗಳ ಆಯ್ಕೆ, ಪಕ್ಷ ರಚನೆ, ಮತಗಟ್ಟೆಗಳ ಸ್ಥಾಪನೆ, ಮತದಾನ, ಮತಪೆಟ್ಟಿಗೆಗಳ ಸಂರಕ್ಷಣೆ ಹಾಗೂ ಮತ ಎಣಿಕೆಯವರೆಗೆ ಪ್ರತಿಯೊಂದು ಹಂತವನ್ನು ಚುನಾವಣಾ ಆಯೋಗದ ಮಾದರಿಯಲ್ಲೇ ನಡೆಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಅರಿವು ಮೂಡಿತು.

ವಿದ್ಯಾರ್ಥಿಗಳ ಮನೆಗಳಿರುವ ಪ್ರದೇಶವನ್ನು ಆಧರಿಸಿ ಓಂತ್ರಡ್ಕ, ಕೋಡಿಂಬಾಳ ಮತ್ತು ದೊಡ್ಡಕೊಪ್ಪ ಎಂಬ ಮೂರು ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಪ್ರತಿ ಮತಗಟ್ಟೆಗೆ ಒಳಪಡುವ ವಿದ್ಯಾರ್ಥಿಗಳ ಪ್ರತ್ಯೇಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಅವರು ಯಾವ ಬೂತ್‌ನಲ್ಲಿ ಮತ ಚಲಾಯಿಸಬೇಕು ಎಂಬ ಮಾಹಿತಿಯನ್ನು ಮುಂಚಿತವಾಗಿಯೇ ನೀಡಲಾಗಿತ್ತು. ಇದರ ಮೂಲಕ ಮತಗಟ್ಟೆ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಕ್ಕಳು ನೇರವಾಗಿ ಅರ್ಥಮಾಡಿಕೊಂಡರು.

ನೈಜ ಚುನಾವಣೆಯ ಮಾದರಿಯಲ್ಲೇ ಬೂತ್‌ವಾರು ವಿದ್ಯಾರ್ಥಿಗಳ ಫೋಟೋ ಸಹಿತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಆಹ್ವಾನಿಸಿ ಪರಿಶೀಲಿಸಿದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು. ಚುನಾವಣೆಯಲ್ಲಿ ‘ಓಂತ್ರಡ್ಕ ಮಕ್ಕಳ ಪಕ್ಷ’ ಹಾಗೂ ‘ಪ್ರಜಾಪ್ರಭುತ್ವ ಮಕ್ಕಳ ಪಕ್ಷ’ ಎಂಬ ಎರಡು ಪಕ್ಷಗಳು ಸ್ಪರ್ಧಿಸಿದವು. ಅಭ್ಯರ್ಥಿಗಳ ಆಯ್ಕೆ, ಪ್ರಚಾರ, ಪಕ್ಷದ ಪರ ಕೆಲಸ, ಮತಯಾಚನೆ, ಬಹುಮತದ ಮಹತ್ವ ಮತ್ತು ಸರ್ಕಾರ ರಚನೆಯ ವಿಧಾನವನ್ನು ವಿದ್ಯಾರ್ಥಿಗಳು ನೈಜವಾಗಿ ಅನುಭವಿಸಿದರು. ಚುನಾವಣೆಯಲ್ಲಿ ಓಂತ್ರಡ್ಕ ಮಕ್ಕಳ ಪಕ್ಷ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿತು.

ಚುನಾವಣಾ ದಿನವನ್ನು ಮುಂಚಿತವಾಗಿಯೇ ಅಧಿಸೂಚನೆ ಮೂಲಕ ಪ್ರಕಟಿಸಲಾಗಿತ್ತು. ಶನಿವಾರ ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳು ತಮ್ಮ ಮನೆಗಳ ಸಮೀಪದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು. ಮತದಾನ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ಶಾಲೆಗೆ ತಂದು ಸುರಕ್ಷಿತವಾಗಿ ಇರಿಸಿ, ಮರುದಿನ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು.

ಮತಗಟ್ಟೆ ಸಿಬ್ಬಂದಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಚುನಾವಣಾ ಸಿಬ್ಬಂದಿಯನ್ನು ಕರೆತರುವ ವಾಹನ ವ್ಯವಸ್ಥೆ, ಭದ್ರತಾ ಸಿಬ್ಬಂದಿ, ಮತಪೆಟ್ಟಿಗೆಗಳ ಸುರಕ್ಷಿತ ಸಾಗಣೆ ಮುಂತಾದ ವ್ಯವಸ್ಥೆಗಳನ್ನೂ ಚುನಾವಣೆಯ ಮಾದರಿಯಲ್ಲೇ ರೂಪಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣೆಯ ಗಂಭೀರತೆ ಹಾಗೂ ಶಿಸ್ತು ಅರಿವಾಯಿತು.

ಚುನಾವಣೆಯ ಫಲಿತಾಂಶದಂತೆ ಮುಖ್ಯಮಂತ್ರಿಯಾಗಿ ಶ್ರವಣ್ ಕುಮಾರ್, ಉಪಮುಖ್ಯಮಂತ್ರಿಯಾಗಿ ಲಕ್ಷ್ಮಣ ಆಯ್ಕೆಯಾದರು. ತನುಷ್ – ಗೃಹಮಂತ್ರಿ, ಪ್ರತೀಶ್ ಕೆ. ಎಸ್ – ಕೃಷಿ ಸಚಿವ, ಶ್ರಾವಣೆ ಕೆ. – ವಾರ್ತಾ ಸಚಿವೆ, ಹರ್ಷನ್ ಪಿ. – ಕ್ರೀಡಾ ಸಚಿವ, ಮಾನ್ಯ – ಶಿಕ್ಷಣ ಸಚಿವೆ, ತಂಸೀರ್ – ನೀರಾವರಿ ಸಚಿವ, ಪೂರ್ಣಿಮಾ – ಆರೋಗ್ಯ ಸಚಿವೆ ಹಾಗೂ ಧನುಷ್ – ಸಾಂಸ್ಕೃತಿಕ ಸಚಿವರಾಗಿ ಆಯ್ಕೆಯಾದರು.

ಕಳೆದ ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ವಿಭಿನ್ನ ಮಾದರಿಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ಇವಿಎಂ ಮೂಲಕ ಮತದಾನ, ಅಂಚೆ ಮತದಾನ ಹಾಗೂ ಮನೆಯಿಂದಲೇ ಆನ್‌ಲೈನ್ ಮತದಾನ ವಿಧಾನಗಳನ್ನು ಪರಿಚಯಿಸಿದ್ದ ಶಾಲೆ, ಈ ಬಾರಿ ‘ತಮ್ಮ ಮನೆಯ ಸಮೀಪದ ಬೂತ್‌ನಲ್ಲಿ ಮತದಾನ’ ಎಂಬ ಹೊಸ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.

error: Content is protected !!
Scroll to Top