(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.25. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸ್ಅಪ್ ಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಅಪಹರಣದ ಬಗೆಗಿನ ವೀಡಿಯೋ ಕ್ಲಿಪ್ ಗಳು ಹಾಗೂ ಸಂದೇಶಗಳು ಸುಳ್ಳಾಗಿದ್ದು ಅನಪೇಕ್ಷಣೀಯವಾಗಿರುತ್ತದೆ.
ಆದುದರಿಂದ ಇಂತಹ ಪ್ರಚೋದನಕಾರಿ ಉಹಾಪೋಹಗಳಿಗೆ ಹಾಗೂ ಸಂದೇಶಗಳಿಗೆ ಕಿವಿಗೊಡದೆ ಮತ್ತು ತಮ್ಮ ಗ್ರಾಮಗಳಲ್ಲಿ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರ ಮೇಲೆ ಹಲ್ಲೆ ಮಾಡುವುದಾಗಲಿ, ಮತ್ಯಾವುದೇ ಕೃತ್ಯಕ್ಕೆ ಮುಂದಾಗದೇ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08257-271995 ಅಥವಾ 9843053901ಕ್ಕೆ ಕರೆ ಮಾಡುವ ಮೂಲಕ ತಿಳಿಸುವಂತೆ ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಡಿ.ಎನ್. ಈರಯ್ಯ ಮನವಿ ಮಾಡಿದ್ದಾರೆ.
ಮಕ್ಕಳ ಅಪಹರಣ ಸುದ್ದಿಯು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಯಾವುದೇ ಠಾಣೆಗಳಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿರುವುದಿಲ್ಲ. ಆದುದರಿಂದ ಇಂತಹ ಸುಳ್ಳು ಸುದ್ದಿಯನ್ನು ಗಣನೆಗೆ ತೆಗೆದುಕೊಳ್ಳದೇ ಮತ್ತು ಇದರಿಂದ ಮಕ್ಕಳ ಮನಸ್ಸಿನ ಮೇಲೆ ಭಯದ ಭಾವನೆಗೆ ಅವಕಾಶ ಮಾಡಬಾರದು. ಮತ್ತು ಅವರ ಆಟೋಟ, ಪಾಠಗಳ ವಿಚಾರವಾಗಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಹಾಗೂ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯುತ ಪರಿಸರ ನಿರ್ಮಾಣಕ್ಕೆ ತಾವೆಲ್ಲಾ ಜವಾಬ್ದಾರಿಯುತ ಪ್ರಜೆಗಳಾಗಿ ವರ್ತಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.