(ನ್ಯೂಸ್ ಕಡಬ) newskadaba.com, ಜೂ.25: “ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕ್ರೌರ್ಯ ಮತ್ತು ಲೈಂಗಿಕ ದುರ್ಬಳಕೆಯ ಗಂಭೀರ ಆರೋಪ ಎದುರಿಸುತ್ತಿರುವ ಬೆಂಗಳೂರಿನ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಎಂಬಾತನಿಗೆ, ರಕ್ಷಿಸಲಾದ 9 ನಾಯಿಗಳ ಕಸ್ಟಡಿಯನ್ನು ಮರಳಿ ನೀಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು “ಆಘಾತಕಾರಿ” ಎಂದು ಕಟುವಾಗಿ ಟೀಕಿಸಿತು.
“ಪ್ರಾಣಿಗಳಿಗೆ ಮೂಕ ವೇದನೆಯಿದ್ದರೂ ಅವು ನೋವನ್ನು ಅನುಭವಿಸುತ್ತವೆ. ನ್ಯಾಯಾಲಯದ ಬಾಗಿಲು ತಟ್ಟಲು ಸಾಧ್ಯವಾಗದ ಜೀವಿಗಳಿಗೂ ನ್ಯಾಯ ಸಿಗಬೇಕು” ಎಂದು ಹೇಳಿದ ಹೈಕೋರ್ಟ್, ನಾಯಿಗಳನ್ನು ಪ್ರಾಣಿದಯಾ ಸಂಘಟನೆಯ ವಶದಲ್ಲೇ ಮುಂದುವರಿಸಲು ಸೂಚಿಸಿದೆ. ಆರೋಪಿ ರಮೇಶ್ ವಿರುದ್ಧ ಭಾರತೀಯ ನ್ಯಾಯಾಂಗ ಸಂಹಿತೆ 2023ರ ಸೆಕ್ಷನ್ 325, 62 ಮತ್ತು ಪ್ರಾಣಿ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.









